ಬಂಟ್ವಾಳ : ಪ್ರಕೃತಿ ಲೀನರಾದ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಂತ್ಯಕ್ರಿಯೆ ಜು. ೨೮ರಂದು ಸಂಜೆ ೪ ಗಂಟೆಗೆ ಅವರ ಅಪೇಕ್ಷೆಯಂತೆ ಏರ್ಯ ಬೀಡು ಮನೆ ವಠಾರದ ಮಜಲು ಗದ್ದೆಯಲ್ಲಿ ಚಿತೆ ನಿರ್ಮಿಸಿ ಅಗ್ನಿ ಸ್ಪರ್ಶ ನಡೆಸಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಬೆಳಗ್ಗಿನಿಂದ ಸಂಜೆ ತನಕ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು, ಅವರ ಅಭಿಮಾನಿಗಳು, ಬಂಧು ಮಿತ್ರರು ಏರ್ಯಬೀಡು ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಬೆಳಗ್ಗೆ ೯ ಗಂಟೆಗೆ ಆಸ್ಪತ್ರೆಯಿಂದ ಅವರ ದೇಹವನ್ನು ಏರ್ಯರು ವಾಸ್ತವ್ಯವಿದ್ದ ಮನೆ ಸಾಕೇತಕ್ಕೆ ತಂದು ಅಲ್ಲಿ ಸುಮಾರು ಅರ್ಧಗಂಟೆ ಹೊತ್ತು ಇಟ್ಟು ನಂತರ ಏರ್ಯ ಬೀಡು ಮೂಲ ಮನೆಗೆ ತರಲಾಗಿತ್ತು.
ಶಾಸ್ತ್ರೀಯ ಕ್ರಮದಂತೆ ದೇಹಶುದ್ಧಿ ಸ್ನಾನಾಧಿ ಕ್ರಿಯೆಗಳ ಬಳಿಕ ಬೀಡಿನ ಚಾವಡಿಯಲ್ಲಿ ದೇಹವನ್ನು ದಕ್ಷಿಣೋತ್ತರವಾಗಿ ಮಲಗಿಸಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ಮಂಗಳೂರು ಮಾಜಿ ಶಾಸಕ ಜೆ.ಆರ್.ಲೋಬೊ, ಸಹಿತ ಜನ ಪ್ರತಿನಿಧಿಗಳು, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಮುಖರಾದ ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ, ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ| ವಿವೇಕ ರೈ, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಯಕ್ಷಗಾನ ವಿದ್ವಾಂಸ ಡಾ| ಪ್ರಭಾಕರ ಜೋಶಿ, ಜಾನಪದ ವಿವಿ ಮಾಜಿ ಕುಲಪತಿ ಡಾ| ಕೆ.ಚಿನ್ನಪ್ಪ ಗೌಡ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ರಾ.ಸ್ವ. ಸಂಘದ ಮಂಗಳೂರು ವಿಭಾಗ ಸಂಘ ಚಾಲಕ ಗೋಪಾಲ ಚೆಟ್ಟಿಯಾರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮರಾಯ ಆಚಾರ್ಯ ಸಹಿತ ಇತರರು ಅಂತಿಮ ನಮನ ಮಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಸಂತಾಪ ವ್ಯಕ್ತ ಮಾಡಿದ್ದಾರೆ.
ಅಂತ್ಯಕ್ರಿಯೆ ಸಂದರ್ಭ ಕದಿನ ಒಡೆಯದಂತೆ , ಬಂಟ್ವಾಳ ಬಂಟರ ಭವನದಲ್ಲಿ ಉತ್ತರಕ್ರಿಯೆ ವ್ಯವಸ್ಥೆ ನಡೆಸುವಂತೆ ಸಾವಿನ ಪೂರ್ವದಲ್ಲಿ ಅವರು ಸೂಚನೆ ನೀಡಿದ್ದಾಗಿ ಕುಟುಂಬ ಮೂಲಗಳು ತಿಳಿಸಿದ್ದಾರೆ.