ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಫೆ.೧೦ರಂದು ನಡೆಯಲಿರುವ ೧೧ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ವಧು-ವರರ ನಿಶ್ಚಿತಾರ್ಥ ಕಾರ್ಯಕ್ರಮ ರವಿವಾರ ಪುಂಜಾಲಕಟ್ಟೆ ನಂದಗೋಕುಲ ಸಭಾಂಗಣದಲ್ಲಿ ಜರಗಿತು.ಪುಂಜಾಲಕಟ್ಟೆ ಅಟೊರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುಧಾಕರ ಶೆಣೈ ಖಂಡಿಗ ಅವರು ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.

ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ,ವಿವಾಹವೆನ್ನುವುದು ಆತ್ಮಗಳ ಸಮ್ಮಿಲನವಾಗಿದೆ. ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರ ಬುನಾದಿಯಾಗಿದೆ. ಇದು ಕುಟುಂಬದ ಹಾಗೂ ಸಮಾಜದ ನೆಮ್ಮದಿಯ ಸುವ್ಯವಸ್ಥೆಯಾಗಿದೆ ಎಂದು ಹೇಳಿದರು.
ತಾ.ಪಂ.ಸದಸ್ಯ ರಮೇಶ್ ಪೂಜಾರಿ ಕುಡುಮೇರ್ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ವಾಮದಪದವು ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಹಾಪ್‌ಕಾಮ್ಸ್ ನಿರ್ದೇಶಕ ವಿಜಯ ರೈ, ಕಾವಳಮೂಡೂರು ಗ್ರಾ.ಪಂ. ಸದಸ್ಯ ಮೋಹನ ಆಚಾರ್ಯ, ಉದ್ಯಮಿ ದಿನೇಶ್ ಶೆಟ್ಟಿ ದಂಬೆದಾರ್, ಗುತ್ತಿಗೆದಾರ ಪ್ರಶಾಂತ್‌ಶೆಟ್ಟಿ, ಮಡಂತ್ಯಾರು ಉಪಸ್ಥಿತರಿದ್ದರು.
ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಕೋಶಾಧಿಕಾರಿ ರಾಜೇಶ್ ಬಂಗೇರ ಪುಳಿಮಜಲು, ಮಾಜಿ ಅಧ್ಯಕ್ಷ ಮಾಧವ ಬಂಗೇರ ಮತ್ತಿತರ ಸದಸ್ಯರು ಭಾಗವಹಿಸಿದ್ದರು.
ಪಿಲಾತಬೆಟ್ಟು ವ್ಯ.ಸೇ.ಸ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ಅತ್ತಾಜೆ ಮತ್ತು ಪ್ರಗತಿಪರ ಕೃಷಿಕ ಗಿರೀಶ್ ಸಾಲ್ಯಾನ್ ಹೆಗ್ಡೆ ಬೆಟ್ಟು ಅವರು ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ , ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಹಿಡಿದು ಮೂರು ಬಾರಿ ಪರಸ್ಪರ ಬದಲಾಯಿಸಿಕೊಂಡರು. ವಧು-ವರರು ಉಂಗುರ ವಿನಿಮಯ ಮಾಡಿಕೊಂಡರು.ವಧು ವರರಿಗೆ ಮಂಗಳ ವಸ್ತ್ರ ವಿತರಿಸಲಾಯಿತು. ೧೩ಜೋಡಿ ವಧು-ವರರು ಸೇರಿದಂತೆ ಅವರವರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.