ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗ ಇಂದು ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ.

ದೆಹಲಿಯ ವಿಜ್ಞಾನ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದದರು. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ.10 ರಂದು ಒಂದೇ ಹಂತದ ಮತದಾನ ಹಾಗೂ ಮೇ.13ರಂದು ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಈಗಾಗಲೇ ಬಿಡುವಿಲ್ಲದ ಚುನಾವಣಾ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ 124 ಮತ್ತು ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಬಿಜೆಪಿ ಸದ್ಯದಲ್ಲೇ ತಮ್ಮ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಬೇಕಿದೆ.
ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 12 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು, ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ, ಮೇ 13 ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ರಾಜ್ಯದಲ್ಲಿ 5,21,73,579 ಜನ ಮತದಾರರಿದ್ದಾರೆ. 2,62,42,561 ಜನ ಪುರುಷ ಮತದಾರರು ಹಾಗೂ 2,59,26,319 ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 12,15,763 ಜನ ಇದ್ದಾರೆ. 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. 9,17,241 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 4,699 ತೃತೀಯ ಲಿಂಗಿ ಮತದಾರರಿದ್ದಾರೆ. 17 ವರ್ಷ ಮೇಲ್ಪಟ್ಟವರು 1,25,406 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಇತ್ತೀಚೆಗೆ ರಾಜ್ಯ ವಿಧಾನಸಭೆ ಚುನಾವಣೆಯ ಸಿದ್ಧತೆ ಪರಿಶೀಲನೆಗಾಗಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಾಹಿತಿ ನೀಡಿದರು.
ಒಂದೊಂದು ಮತಗಟ್ಟೆಯಲ್ಲಿ 833 ಮತದಾರರು ಮತ ಚಲಾಯಿಸಬಹುದಾಗಿದೆ. 80 ವರ್ಷ ಮೇಲ್ಪಟ್ಟ ವಯೋಮಾನದವರು ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತಚಲಾಯಿಸಲು ಅವಕಾಶ ಕಲ್ಪಿಸಲಾಗುವುದು. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.

