ಬಂಟ್ವಾಳ : ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಡಿ ಎಂದು ಹೆಂಡತಿಯೋಬ್ಬಳು ಗಂಡನ ವಿರುದ್ದ ಆಕ್ಷೇಪಣೆ ಪತ್ರ ಸಲ್ಲಿಸಿದ ವಿಲಕ್ಷಣ ಘಟನೆ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.
ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನವೀನ್ ಎಂಬವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು.
ಅ ಬಳಿಕ ಇಂದು ನಾಮಪತ್ರದ ಪರಿಶೀಲನೆ ವೇಳೆ ಇವರ ಪತ್ನಿ ಬೆಳ್ತಂಗಡಿ ನಿವಾಸಿ ಅಕ್ಷತಾ ಅವರು ಅನಂತಾಡಿ ಗ್ರಾಮ ಪಂಚಾಯತ್ ಗೆ ಆಗಮಿಸಿ ನನ್ನ ಗಂಡನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಚುನಾವಣಾಧಿಕಾರಿಯವರಿಗೆ ಆಕ್ಷೇಪಣೆ ಪತ್ರ ನೀಡಿದ್ದಾರೆ.
ನವೀನ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಸಹಿತ ಮೂರು ಪ್ರಕರಣಗಳು ದಾಖಲು ಇದೆ. ಹಾಗಾಗಿ ಅವರಿಗೆ ಚುನಾವಣೆ ಗೆ ಸ್ಪರ್ಧಿಸಲು ಅವಕಾಶ ನೀಡಬಾರದು,ಜೊತೆಗೆ ನವೀನ್ ಅವರ ಮೇಲೆ ಕ್ರಿಮಿನಲ್ ಪ್ರಕರಣ ಇದ್ದರೂ ಕೂಡ ನಾಮಪತ್ರದಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ ಗಳು ಇಲ್ಲ ಎಂದು ನಮೂದಿಸಿದ್ದಾರೆ ಎಂದು ಇದು ನ್ಯಾಯಸಮ್ಮತವೇ ಎಂದು ಅವರು ಪ್ರಶ್ನಿಸಿ ಆಕ್ಷೇಪಣೆ ಪತ್ರ ನೀಡಿದ್ದಾರೆ.














