ಬಂಟ್ವಾಳ: ಸುಸಜ್ಜಿತವಾದ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆಯಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಿಯಾದ ವಿಭಾಗದಲ್ಲಿ ವೈದ್ಯರುಗಳಿಲ್ಲದೆ, ತಾಲೂಕಿನ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಸಾಮಾಜಿಕ ಕಾರ್ಯಕರ್ತ ಸಮಾದ್ ಕೈಕಂಬ ಅವರು ಜನತಾದರ್ಶನ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ನೀಡಿದ್ದಾರೆ.


ಬೇಕಾದಷ್ಟು ಬೆಡ್ ಗಳು, ಹೈಟೆಕ್ ಸವಲತ್ತುಗಳನ್ನು ಹೊಂದಿರುವ ಆಸ್ಪತ್ರೆಗೆ ಬೇಕಾದದ್ದು ವೈದ್ಯರು. ಆದರೆ ಬಂಟ್ವಾಳದ ಹೃದಯಭಾಗದಲ್ಲಿರುವ ಬಂಟ್ವಾಳ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ 2022ರ ಸೆಪ್ಟೆಂಬರ್ ತಿಂಗಳ ಬಳಿಕ ಇದುವರೆಗೂ ಪ್ರಸೂತಿತಜ್ಞರ ನೇಮಕವಾಗಿಲ್ಲ. ಪ್ರಕಟಣೆ ಕೊಟ್ಟರೂ ವೈದ್ಯರು ಬರುತ್ತಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಲು ಯಾರೂ ಸಿಗುತ್ತಿಲ್ಲ. ಇಲ್ಲಿ, ಕಾಯಂ ವೈದ್ಯರನ್ನೇ ನೇಮಿಸಬೇಕಾಗಿದೆ.
ಬಡವರ್ಗದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಅನುಷ್ಠಾನಕ್ಕೆ ತರುವಲ್ಲಿ ಎಡವಿದೆ ಎಂದು ಹೇಳಲಾಗುತ್ತಿದೆ. ಯೋಜನೆಗಳು ನೂರಾರು ಇದ್ದರೇನು ಫಲ, ಅನುಭವಿಸಲು ಸಾಧ್ಯವಾಗದೆ ಫಲಾನುಭವಿಗಳು ವಂಚಿತರಾಗುವುದು ಸರಿಯೇ ಎಂಬ ಮಾತುಗಳು ಕೇಳಿ ಬಂದಿದೆ.
ಪೂರ್ಣಪ್ರಮಾಣದ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ತಾಲೂಕಿನ ಬಡವರ ಆರೋಗ್ಯ ರಕ್ಷಣೆ ಮೇಲೆ ಪ್ರಭಾವ ಬೀರಿದೆ. ಹಾಗಾಗಿ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತವಾದ ಸಮಯದಲ್ಲಿ ಪರಿಹಾರ ಕ್ಕೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ತಾಲೂಕಿನ ಮಂಚಿ, ಪುದು ಮತ್ತು ಬೆಂಜನಪದವು ಆರೋಗ್ಯ ಕೇಂದ್ರದಲ್ಲಿ ಸಮಸ್ಯೆ ಇರುವ ಬಗ್ಗೆ ಆರೋಪ ಕೇಳಿ ಬಂದಿದೆಯಾದರೂ ತಾಲೂಕು ವೈದ್ಯಾಧಿಕಾರಿ ಇದನ್ನು ಅಲ್ಲಗಳೆದಿದ್ದಾರೆ. ಮೂರು ಆಸ್ಪತ್ರೆಯಲ್ಲಿ ವೈದ್ಯರು ಇದ್ದಾರೆ,ಇದು ತಪ್ಪು ಮಾಹಿತಿ ಎಂದು ಅವರು ತಿಳಿಸಿದ್ದಾರೆ . ಆದರೆ ಈ ಮೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ. ಜೊತೆಗೆ ಅಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದೆ ಅವ್ಯವಸ್ಥೆಯಿಂದ ಕೂಡಿರುವ ಬಗ್ಗೆ ದೂರುಗಳು ಕೇಳಿಬಂದಿದೆ. ಹಾಗಾಗಿ ಸಾಕಷ್ಟು ಜನಸಂಖ್ಯೆ ಹೊಂದಿರುವ ಈ ಮೂರು ಗ್ರಾಮದಲ್ಲಿ ಜನರ ಆರೋಗ್ಯ ರಕ್ಷಣೆ ಪಡೆಯಲು ಆರೋಗ್ಯ ಕೇಂದ್ರದ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂಬ ಮನವಿ ಮಾಡಿದ್ದಾರೆ.
ತಾಲೂಕು ಆಸ್ಪತ್ರೆಗೆ ವೈದ್ಯರನ್ನು ನೀಡಿ : ವೈದ್ಯಾಧಿಕಾರಿ ಮನವಿ
ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು,ಇದನ್ನು ನೀಗಿಸಲು ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪುಷ್ಪಲತಾ ಅವರು ಮನವಿ ಮಾಡಿದ್ದಾರೆ.
ಇಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಅವರು ವೈದ್ಯರ ನೇಮಕ ಮಾಡಿದ್ದಲ್ಲಿ ಜನರಿಗೆ ಸರಿಯಾದ ರೀತಿಯಲ್ಲಿ ಸೇವೆ ನೀಡಲು ಸಾಧ್ಯ ವಾಗುವ ಬಗ್ಗೆ ತಿಳಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಸಚಿವರು ಈಗಾಗಲೇ ವೈದ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವಾಗಿ ಇಲ್ಲಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ .
ಸರಕಾರಕ್ಕೆ ಮನವಿ : ಸಿರಾಜ್ ಮದಕ
ಸುಸಜ್ಜಿತ ಆಸ್ಪತ್ರೆಯಿದ್ದರೂ ವೈದ್ಯರ ಕೊರತೆಯಿಂದ ತಾಲೂಕು ಆಸ್ಪತ್ರೆ ಕೊರಗುತ್ತಿದ್ದು, ಜನಸಾಮಾನ್ಯರಿಗೆ ಸರಕಾರದ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಸಿಗದೆ ವಂಚಿತರಾಗಿದ್ದಾರೆ ಎಂದು ಸಿರಾಜ್ ಮದಕ ತಿಳಿಸಿದ್ದಾರೆ.
ಅಗತ್ಯವಾಗಿ ಬೇಕಾಗಿರುವ ಅರಿವಳಿಕೆ ತಜ್ಞರು, ಪ್ರಸೂತಿ ತಜ್ಞರು,ಸ್ತ್ರೀ ರೋಗ ತಜ್ಞರ ಹುದ್ದೆ ಖಾಲಿಯಿದ್ದು, ಪೋಸ್ಟ್ ಮಾರ್ಟ್ಂ ಸಿಬ್ಬಂದಿಯೂ ಇಲ್ಲದಿದ್ದು, ತಾಲೂಕಿನ ಜನತೆ ಸಮಸ್ಯೆ ಅನುಭವಿಸುತ್ತಿದೆ ಎಂಬ ಆರೋಪ ಮಾಡಿದ್ದಾರೆ.