ಬಂಟ್ವಾಳ: ಗೋಮಾಂಸ ಭಕ್ಷಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಅದು ಪಕ್ಷದ್ದಲ್ಲ. ಅದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಂಟ್ವಾಳದಲ್ಲಿ ನಡೆಯುತ್ತಿರುವ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗೋಹತ್ಯೆ ನಿಷೇಧ ಮಸೂದೆಗೆ ಸುಗ್ರೀವಾಜ್ಞೆ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಗೋಹತ್ಯೆ ನಿಷೇಧ ಕಾನೂನು ಅಗತ್ಯವಿರಲಿಲ್ಲ, ರಾಜಕಾರಣ ಉದ್ದೇಶದಿಂದ ಇದನ್ನ ಜಾರಿ ಮಾಡಿದ್ದಾರೆ, ಗೋವನ್ನ ಪೂಜಿಸುವ ಪದ್ಧತಿ ಮೊದಲಿನಿಂದಲೂ ಇದೆ ಸಿದ್ದರಾಮಯ್ಯನವರು ಅವರ ಅಭ್ಯಾಸದ ಬಗ್ಗೆಯಷ್ಟೇ ಹೇಳಿದ್ದಾರೆ, ಸಿದ್ದರಾಮಯ್ಯ ಹೇಳಿಕೆಯಿಂದ ಪಕ್ಷಕ್ಕೆ ನಷ್ಟವಿಲ್ಲ. ಕಾರ್ಯಕರ್ತರ ಬಳಿ ಅವರ ಸ್ವಂತ ಅಭಿಪ್ರಾಯ ಹಂಚಿಕೊಂಡ್ರೆ ತಪ್ಪೇನಿದೆ ಎಂದರು.
ಎಲ್ಲಾ ವರ್ಗದ ಮಂದಿಯೂ ಹೈನುಗಾರಿಕೆ ಮಾಡುತ್ತಾರೆ. ಅವರೆಲ್ಲರಿಗೂ ಸರಕಾರ 25 ರಿಂದ 50 ಸಾವಿರ ರೂ. ಪರಿಹಾರ ನೀಡಲಿ. ಆಮೇಲೆ ಅವರ ಮನೆಗೆ ಬೇಕಾದ್ರೂ ಕರೆದೊಯ್ಯಲಿ ಎಂದು ಅವರು ಹೇಳಿದರು.
ಪುಣ್ಯಭೂಮಿಯಿಂದ ಸಂಘಟನೆ: ಪುಣ್ಯಭೂಮಿ ಕರಾವಳಿಯಿಂದ ಪಕ್ಷ ಸಂಘಟನೆಯ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದೇವೆ, ತಳಮಟ್ಟದ ಕಾರ್ಯಕರ್ತರು, ನಾಯಕರ ಅಭಿಪ್ರಾಯಗಳನ್ನು ವಿಭಾಗಮಟ್ಟದ ಸಮಾವೇಶದ ಮೂಲಕ ತಿಳಿದುಕೊಂಡು ರಾಜ್ಯವ್ಯಾಪಿ ಹೋರಾಟ ರೂಪಿಸಲಾಗುವುದು ಎಂದ ಅವರು, ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಕಾಂಗ್ರೇಸ್ ಅಧಿಕಾರಕ್ಕೆ ಬರಲಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಉಪಸ್ಥಿತರಿದ್ದರು.
