ವಿಟ್ಲ : ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರೋತ್ಸವ ಸೋಮವಾರದಂದು ಧ್ವಜಾರೋಹಣದೊಂದಿಗೆ, ನಾನಾ ವೈದಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡವು. ಪ್ರತಿಷ್ಠಾ ಬ್ರಹ್ಮಕಲಶೋತ್ಸವದ 6ನೇ ವರ್ಷದ ಈ ಜಾತ್ರೋತ್ಸವದಲ್ಲಿ ಸಹಸ್ರಾರು ಮಂದಿ ಭಕ್ತರು ದೇವರ ಜಾತ್ರೆಯ ಕೊಡಿ ಏರುವ ಸಂದರ್ಭದಲ್ಲಿ ಭಾಗವಹಿಸಿದ್ದರು. ಧ್ವಜಾರೋಹಣದ ಬಳಿಕ ದೇವಸ್ಥಾನದ ವಠಾರದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ದೇಗುಲದ ಅನುವಂಶಿಕ ಆಡಳಿತದಾರರಾದ ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು, ತಂತ್ರಿಗಳು, ಅರ್ಚಕ ವೃಂದ, ಸೀಮೆಯ ಗುರಿಕ್ಕಾರರು, ಆಡಳಿತ ಸಮಿತಿ ಪದಾಧಿಕಾರಿಗಳು ಇದ್ದರು. ಶ್ರೀ ಕ್ಷೇತ್ರದಲ್ಲಿ ಸೂರ್ಯೋದಯದಿಂದ ಸೂರ್ಯಸ್ತದವರೆಗೆ ಅರ್ಧ ಏಕಾಹ ಭಜನೆ ನಡೆಯಿತು.
ಸಂಜೆ ವಿಟ್ಲ ಶ್ರೀ ಚಂದ್ರನಾಥ ಬಸದಿಯಿಂದ ಭಜನಾ ಉಲ್ಪೆ ಮೆರವಣಿಗೆ ನಡೆಯಿತು. ಭಜನಾ ಮಂಗಳೋತ್ಸವ ನಡೆದ ಬಳಿಕ ಶ್ರೀ ಕ್ಷೇತ್ರದಲ್ಲಿ ವಿಶೇಷ ಲಕ್ಷ ದೀಪೋತ್ಸವ ನಡೆಯಿತು.

