ವಿಟ್ಲ: ಧರ್ಮ ಪಥದ ಮೂಲಕ ಜೀವನ ಎಂಬ ರಥ ಸಾಗಿದಾಗ ಮಾತ್ರ ಬದುಕಿನ ಯಾತ್ರೆ ಪರಮಪದವನ್ನು ಪಡೆಯಬಹುದು. ಸಂಕಷ್ಟ, ಸಮಸ್ಯೆಗಳನ್ನು ಮೆಟ್ಟಿಲುಗಳ ಹಾಗೆ ಬಳಸಿ ಮುನ್ನಡೆಯಬೇಕು. ವಾಸ್ತವದೊಂದಿಗೆ ಬದುಕಿದಾಗ ನಿಜಾರ್ಥದಲ್ಲಿ ಬದುಕಲು ಸಾಧ್ಯ. ದೇಹ ಎನ್ನುವ ರಥವನ್ನು ಮನಸ್ಸೆಂಬ ಹಗ್ಗದಿಂದ ಕಟ್ಟಿ ಬುದ್ಧಿ ಎಂಬ ಸಾರಥಿಯ ಕೈಗೆ ನೀಡಿದಾಗ ಸಲೀಸಾಗಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಒಡಿಯೂರು ಆತ್ರೇಯ ಮಂಟಪದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆದ ಶ್ರೀ ಒಡಿಯೂರು ರಥೋತ್ಸವದ ಧಾರ್‍ಮಿಕ ಸಭೆಯನ್ನು ಉದ್ಘಾಟಿಸಿ, ಸಹಾಯಕ ಹಸ್ತ ವಿತರಿಸಿ ಆಶೀರ್ವಚನ ನೀಡಿದರು.
ಯೋಧರ ತ್ಯಾಗದ ಹಿಂದೆ ನಮ್ಮ ಸುಖವಿದೆ. ಎದೆಕೊಟ್ಟು ಸೆಟೆದು ನಿಲ್ಲುವ ಕಾರ್‍ಯ ಯೋಧರಿಂದ ನಡೆಯಲಿ. ಉಗ್ರರು ಕದ್ದು ಮಾಡಿದ ಯುದ್ಧವನ್ನು ಖಂಡಿಸುವ ಜತೆಗೆ ಪ್ರತ್ಯುತ್ತರ ನೀಡುವ ಕಾರ್‍ಯವಾಗಬೇಕು. ನೀಚ ಕೃತ್ಯಕ್ಕೆ ದೇವರ ಬಲ ಯಾವತ್ತೂ ಇರುವುದಿಲ್ಲ. ಯೋಧರಿಗೆ ಸಾಂತ್ವನ ಹೇಳುವ ಕಾರ್‍ಯ ಸಮಾಜ ಮಾಡಬೇಕು. ಉಗ್ರರನ್ನು ಮುಗಿಸಲು ನಮ್ಮ ಸೇನೆಗೆ ಭಗವಂತ ಭೀಮ ಬಲ ನೀಡಲಿ ಎಂದರು.
ಆಶೀರ್ವಚನ ನೀಡಿದ ಸಾಧ್ವಿ ಶ್ರೀಮಾತಾನಂದಮಯಿ ನಂಬಿಕೆಯೇ ಸಂಪತ್ತಿನ ಮೂಲವೆನಿಸಿದೆ. ಸಂತರು ಇರುವಲ್ಲಿ ಆನಂದ ತುಂಬಿರುತ್ತದೆ. ಸಮಷ್ಟಿಯ ಸರ್ವ ಉದ್ಧಾರವೇ ಪೂಜ್ಯ ಗುರುಗಳ ಆಶಯವಾಗಿದೆ ಎಂದು ತಿಳಿಸಿದರು.
ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ ಮಠಮಂದಿರಗಳು ಶಾಂತಿಯುತ ಸಮಾಜ ನಿರ್‍ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಒಡಿಯೂರು ಗ್ರಾಮ ವಿಕಾಸ ಯೋಜನೆ ನೂರಾರು ಸೇವಾ ಕೈಂಕರ್‍ಯಗಳನ್ನು ನಡೆಸುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ವತಿಯಿಂದ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.


ವಿಶಾಖಪಟ್ಟಣ ಆದಾಯ ತೆರಿಗೆ ಇಲಾಖೆ ಕಮಿಷನರ್ ಟಿ. ಎಸ್. ಎನ್. ಮೂರ್ತಿ, ಮೈಸೂರು ಪೋಲಿಸ್ ತರಬೇತಿ ಪ್ರಿನ್ಸಿಪಾಲ್ ಧರಣೀದೇವಿ ಮಾಲಗತ್ತಿ, ಉದ್ಯಮಿ ವಿಶ್ವನಾಥ ಶೆಟ್ಟಿ ಕರ್ನಿರೆ, ಮುಂಬೈ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಆರ್‌ಟಿಓ ಅಧಿಕಾರಿ ಅಜಿತ್ ಕುಮಾರ್ ಪಂದಳಂ, ಗುರುದೇವ ಸೇವಾಬಳಗದ ವಾಮಯ್ಯ ಬಿ. ಶೆಟ್ಟಿ, ಅಶೋಕ್ ಕುಮಾರ್ ಬಿಜೈ, ಎ. ಸುರೇಶ್ ರೈ, ಕೃಷ್ಣ ಎಲ್. ಶೆಟ್ಟಿ, ಜಯಂತ್ ಜೆ. ಕೋಟ್ಯಾನ್, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸರ್ವಾಣಿ ಪಿ. ಶೆಟ್ಟಿ, ರೇವತಿ ಡಿ. ಶೆಟ್ಟಿ ಇನ್ನಿತರರು ಇದ್ದರು.
ನಿತ್ಯಶ್ರೀ ರೈ ಪ್ರಾರ್ಥಿಸಿದರು. ಯಶವಂತ ವಿಟ್ಲ ಸ್ವಾಗತಿಸಿ ಪ್ರಸ್ತಾವನೆಗೈದರು. ಸದಾಶಿವ ಅಳಿಕೆ ಸಹಾಯಹಸ್ತ ಫಲಾನುಭವಿಗಳ ಪಟ್ಟಿ ಓದಿದರು. ಮಾತೇಶ್ ಭಂಡಾರಿ ವಂದಿಸಿದರು. ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಕಾರ್‍ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಸಂಸ್ಥಾನದ ವತಿಯಿಂದ ನಾನಾ ರೀತಿಯ ಸಹಾಯಹಸ್ತ ವಿತರಿಸಲಾಯಿತು. ವೇ.ಮೂ. ಚಂದ್ರಶೇಖರ ಉಪಾಧ್ಯಾಯ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀಸಹಿತ ಸತ್ಯನಾರಾಯಣ ಪೂಜೆ ನಡೆಯಿತು.