Monday, February 10, 2025

ಧರ್ಮಸ್ಥಳದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚಾಲನೆ

ಧರ್ಮಸ್ಥಳ: ಧರ್ಮಸ್ಥಳದ ಬಾಹುಬಲಿ ಮಹಾಮಸ್ತಕಾಭಿಷೇಕ ಹಾಗೂ ಚತುಷ್ಪಥ ರಸ್ತೆ ಪ್ರಥಮ ಹಂತ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು, ಅಪೂರ್ವ ಸಂಕಲ್ಪ ಶಕ್ತಿ ಮತ್ತು ಅನನ್ಯ ಧಾರ್ಮಿಕ ಪರಂಪರೆಯ ಮೂರ್ತ ರೂಪವಾಗಿ ಬಾಹುಬಲಿ ಸ್ವಾಮಿ ಇಲ್ಲಿ ರಾರಾಜಿಸಿದ್ದಾರೆ.

ವಿಪ್ಲವಪೂರಿತ ಸಮಾಜಕ್ಕೆ ಶಾಂತಿ-ಸಮಚಿತ್ತಗಳೇ ದಿವ್ಯ ಔಷಧಿಗಳು ಎಂಬ ಸಂದೇಶ ಸಾರುತ್ತಿರುವ ಈ ಭವ್ಯ ಮೂರ್ತಿಗೆ ಮತ್ತೊಮ್ಮೆ ಭಕ್ತಿಪೂರ್ವಕ ನಮನಗಳು.

ಕನ್ನಡ ಮತ್ತು ಜೈನ ಧರ್ಮ ಹಾಲು ಜೇನಿನಂತಹುದು

ಕನ್ನಡ ಸಂಸ್ಕೃತಿ ಮತ್ತು ಜೈನಧರ್ಮದ ಸಂಬಂಧ ಹಾಲು ಜೇನಿನಂತಹುದು. ಕನ್ನಡದ ಮೊದಲ ಕೃತಿ, ಕವಿರಾಜ ಮಾರ್ಗದ ಕರ್ತೃವಾದ ಶ್ರೀ ವಿಜಯನಿಂದ ಮೊದಲ್ಗೊಂಡು ಕನ್ನಡ ಸಾಹಿತ್ಯದ ರತ್ನತ್ರಯರ ಆದಿಯಾಗಿ ಜಿನಸೇನಾಚಾರ್ಯ, ಸಮಂತಭದ್ರ, ಶಿವಕೋಟ್ಯಾಚಾರ್ಯ, ನಾಗವರ್ಮ ಮೊದಲಾದ ಸಾಹಿತ್ಯ ದಿಗ್ಗಜರಂತೆಯೇ ಕನ್ನಡದ ಶಿಲ್ಪಕಲೆ, ಸಮಾಜ ಜೀವನ ಮತ್ತು ಇತಿಹಾಸದ ಸುವರ್ಣ ಪುಟಗಳಲ್ಲಿ ತಮ್ಮ ಛಾಪು ಮೂಡಿಸಿದ ಜೈನ ಸಾಧಕರ ಪರಂಪರೆಯೇ ಕನ್ನಡ ಸಂಸ್ಕೃತಿಯ ಭಾಗವಾಗಿದೆ.

ಮಂಜುನಾಥನ ಸುತ್ತ ಜೀವನ ಮಾರ್ಗಗಳಿವೆ

ದಾನ ಚಿಂತಾಮಣಿ ಅತ್ತಿಮಬ್ಬೆ ಯಂತಹ ಮಹಾನ್ ಸಾಹಿತ್ಯ ಪೋಷಕಿಯನ್ನು ಮರೆಯುವುದಾದರೂ ಹೇಗೆ ? ಈ ಶ್ರೀಮಂತ ಸಮೃದ್ಧ ಮತ್ತು ಸಂಪನ್ನ ಪರಂಪರೆಯ ಮುಂದುವರಿಕೆಯೇ ಧರ್ಮಸ್ಥಳ.

ಸಮಸ್ತ ಕನ್ನಡಿಗರಿಗೆ ಧರ್ಮಸ್ಥಳದ ದೈವಶಕ್ತಿಯಲ್ಲಿ, ಧರ್ಮಸ್ಥಳದ ನ್ಯಾಯಪೀಠದಲ್ಲಿ ಅನನ್ಯವಾದ ನಂಬಿಕೆ. ತಮ್ಮ ಧಾರ್ಮಿಕ ನಂಬಿಕೆ, ದೈನಂದಿನ ಬದುಕು ಮತ್ತು ಜೀವನ ಮಾರ್ಗಗಳನ್ನು ಧರ್ಮಸ್ಥಳದ ಮಂಜುನಾಥನ ಸುತ್ತಲೇ ಹೆಣೆದುಕೊಂಡು ಬಂದವರು ನಾವು. ನಮಗೆ ಧರ್ಮಸ್ಥಳ ಎಂಬುದೊಂದು ಕೇವಲ ಸ್ಥಳದ ಹೆಸರಲ್ಲ. ಅದೊಂದು ಪರಂಪರಾಗತ ದೈವಿಕ ಸ0ಕೇತ ಮತ್ತು ವಿಶ್ವಾಸ.

ನ್ಯಾಯಪೀಠವನ್ನು ಮುಂದಿಟ್ಟುಕೊಂಡು ಬಾಳು ಕಟ್ಟಿಕೊಂಡವರು

ಮಂಜುನಾಥನನ್ನು ಧರ್ಮಸ್ಥಳದ ನ್ಯಾಯಪೀಠವನ್ನು ಮುಂದಿಟ್ಟುಕೊಂಡೇ ಬಾಳು ಕಟ್ಟಿಕೊಂಡವರು ನಾವು. ನಮ್ಮ ಪ್ರತಿ ಆಣೆ, ಸಂಕಲ್ಪ, ಪ್ರಾರ್ಥನೆಯ ಹಿಂದಿರುವ ಪ್ರೇರಣೆಯೇ ಮಂಜುನಾಥ ಮತ್ತು ಧರ್ಮಸ್ಥಳ ನ್ಯಾಯಪೀಠದ ಬೆನ್ನಿಗಿರುವ ಜಾತ್ಯಾತೀತ ಮತ್ತು ಕಾಲಾತೀತ ನಿರಪೇಕ್ಷ ಸತ್ಯನಿಷ್ಠೆ.

ನಮ್ಮ ಸೌಭಾಗ್ಯವೆಂದರೆ, ಧರ್ಮಸ್ಥಳದ ಸರ್ವಧರ್ಮ ಸಮನ್ವಯ ಮತ್ತು ಮಾನವ ಜಾತಿ ತಾನೊಂದೆ ವಲಂ ಎಂಬ ಸತ್ ಸಂಪ್ರದಾಯವನ್ನು ಧರ್ಮಸ್ಥಳದ ಶ್ರೀಕ್ಷೇತ್ರ ಮುಂದುವರೆಸಿಕೊಂಡು ಬರುತ್ತಿರುವುದು.

ಹತ್ತು, ಹಲವು ಕಾರ್ಯಕ್ರಮಗಳು

ಸಂಘಟನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಕಾರ್ಯಕ್ರಮಗಳು, ಕೃಷಿ ತರಬೇತಿ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ, ಪ್ರಗತಿ ನಿಧಿಯಂತಹ ವ್ಯವಸ್ಥೆ, ಜನಜಾಗೃತಿ, ಪರ್ಯಾಯ ಇಂಧನ ಕಾರ್ಯಕ್ರಮಗಳು, ಶೈಕ್ಷಣಿಕ ಅಭಿವೃದ್ಧಿಯ ಯೋಜನೆಗಳು ಮೊದಲಾದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ನಾಡಿನ ಸಮಗ್ರವಾದ ಬೆಳವಣಿಗೆಯಲ್ಲಿ ಸರ್ಕಾರದೊಂದಿಗೆ ಯಶಸ್ವಿಯಾಗಿ ಕೈಜೋಡಿಸಿದ ಹೆಗ್ಗಳಿಕೆ ಧರ್ಮಸ್ಥಳದ್ದು.

ಕರ್ನಾಟಕವನ್ನು ಜಲಸಮೃದ್ಧವನ್ನಾಗಿ ಮಾಡುವ ಯೋಜನೆ

ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಮೊದಲ ಬಾರಿ ನಡೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಶ್ರೀ ವಿರೇಂದ್ರ ಹೆಗಡೆಯವರು ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ಲಕ್ಷಾಂತರ ಕೃಷಿಕರ ಬಾಳಿನ ಬೆಳಕಾಗಿದೆ. ಈ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ಕೈಗೊಂಡಿರುವ ಕೆರೆಗಳ ಕಾಯಕಲ್ಪ ಯೋಜನೆ ಅವರ ಮೊದಲ ಯೋಜನೆಯಂತೆಯೇ ಕರ್ನಾಟಕವನ್ನು ಜಲಸಮೃದ್ಧವನ್ನಾಗಿ ಮಾಡುವ ಕನಸನ್ನು ನನಸು ಮಾಡುತ್ತದೆ ಎಂದು ಅಚಲ ನಂಬಿಕೆ. ಏಕೆಂದರೆ ಧರ್ಮಸ್ಥಳದ ಕತೃತ್ವ ಶಕ್ತಿಗೆ ಮತ್ತು ತನ್ನ ಯೋಜನೆಗಳನ್ನು ಅದು ಅನುಷ್ಠಾನಗೊಳಿಸುವ ರೀತಿಗೆ ಸರಿಸಾಟಿ ಇಲ್ಲ.

ಸ್ವಚ್ಛ ಧಾರ್ಮಿಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ಧರ್ಮಸ್ಥಳ

ಧರ್ಮಸ್ಥಳ ದೇಶದ ಅತ್ಯಂತ ಸ್ವಚ್ಛ ಧಾರ್ಮಿಕ ಕೇಂದ್ರ ಎಂಬ ಪ್ರಶಸ್ತಿಗೆ ಪಾತ್ರವಾಗಿರುವುದಕ್ಕೆ ಶ್ರೀ ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಕ್ರಮಗಳೇ ಕಾರಣವಾಗಿದೆ.

ನಾಡಿನಾದ್ಯಂತ ಉತ್ತಮ ಗುಣಮಟ್ಟದ ಯೋಗ, ನೈತಿಕ ಶಿಕ್ಷಣ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಆಡಳಿತ ಶಿಕ್ಷಣ, ವೈದ್ಯಕೀಯ ಹಾಗೂ ಕಾನೂನು ಕಾಲೇಜುಗಳನ್ನು ನಡೆಸುತ್ತಾ ಬಂದಿರುವ ವೀರೇಂದ್ರ ಹೆಗ್ಗಡೆಯವರ ಪ್ರಸ್ತಾಪಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯಕ್ಕೆ ನಮ್ಮ ಸರ್ಕಾರ ಅನುಮತಿ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ದುಶ್ಚಟಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು

ದುಶ್ಚಟ ಮುಕ್ತ ಸಮಾಜವೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮ ಜನಜಾಗೃತಿಯ ಮುಖೇನ ಸಮಾಜದಲ್ಲಿ ಮುಖ್ಯವಾಗಿ ದುರ್ಬಲ ವರ್ಗದಲ್ಲಿ ದುಶ್ಚಟಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಲಾಗುತ್ತಿರುವುದು ಅತ್ಯಂತ ಸಾರ್ಥಕವಾದ ಕಾರ್ಯ.

ಸತ್ಕಾರ್ಯದ ಹೊನಲು ಹರಿಯುತ್ತಿರಲಿ

ಧರ್ಮಸ್ಥಳದ ಈ ಸತ್ಕಾರ್ಯದ ಹೊನಲು ಸದಾ ನಮ್ಮ ನಾಡಿನಲ್ಲಿ ಹರಿಯುತ್ತಿರಲಿ. ಧಾರ್ಮಿಕ ಸಂಸ್ಥೆಯೊಂದು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುವ ಈ ಅಪೂರ್ವವಾದ ಉದಾಹರಣೆ ಇಡೀ ಜಗತ್ತಿಗೇ ಮಾದರಿಯಾಗಲಿ ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ ಎಂದು ಹೇಳಿದರು.

More from the blog

ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆಯಿತು ಪೂರ್ವಭಾವಿ ಸಭೆ

ಬಂಟ್ವಾಳ:  ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಇಲ್ಲಿ ನಡೆಯುವ ಶತಚಂಡಿಕಯಾಗದ ಹಾಗೂ ಕುಪ್ಪೆಟ್ಟು ಬರ್ಕೆ ಕರ್ಪೆ ಪ್ರತಿಷ್ಠಾ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್...

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...