ಉಜಿರೆ: ನಾವು ಮಾಡುವ ವೃತ್ತಿ ಮತ್ತು ಮಾತನಾಡುವ ಭಾಷೆ ಬಗ್ಗೆ ಕೀಳರಿಮೆ ಸಲ್ಲದು. ಕನ್ನ ಭಾಷೆಯಲ್ಲಿ ಸೊಗಸಿದೆ, ಸೊಗಡಿದೆ. ಅಮೂಲ್ಯ ಸಂಸ್ಕೃತಿ ಇದೆ. ಭವ್ಯಇತಿಹಾಸ ಇದೆ. ನಾವು ಮಾಡುವ ವೃತ್ತಿ ಮತ್ತು ಮಾತನಾಡುವ ಕನ್ನಡ ಭಾಷೆ ಬಗ್ಗೆ ಕೀಳರಿಮೆ ಸಲ್ಲದು ಎಂದು ಖ್ಯಾತ ಚಲನ ಚಿತ್ರಕಲಾವಿದ ಮುಖ್ಯಮಂತ್ರಿ ಚಂದ್ರು ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಆಯೋಜಿಸಲಾದ ಹದಿನೇಳನೆ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು.
ಭಾಷೆಗೂ, ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಭಾಷೆ ನಾಶವಾದರೆ, ಸಂಸ್ಕೃತಿಯೂ ನಾಶವಾಗುತ್ತದೆ. ಪ್ರಪಂಚದಲ್ಲಿ ಆರು ಸಾವಿರಕ್ಕೂ ಮಿಕ್ಕಿ ಭಾಷೆಗಳಿದ್ದು, ಎರಡೂವರೆ ಸಾವಿರ ಭಾಷೆಗಳು ವಿನಾಶದಂಚಿನಲ್ಲಿವೆ. ಗ್ರಾಮೀಣ ಪ್ರದೇಶದಜನರು ಶುದ್ಧಕನ್ನಡ ಮಾತನಾಡುತ್ತಾರೆ. ಯಕ್ಷಗಾನದಲ್ಲಿ ಹಾಗೂ ಜನಪದ ಸಾಹಿತ್ಯದಲ್ಲಿ ಭಾಷೆಯ ಸೊಗಡಿದೆ. ಭಾಷಾ ಪ್ರೌಢಿಮೆ ಇದೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಜೈನರ ಕೊಡುಗೆಯನ್ನು ಅವರು ಶ್ಲಾಘಿಸಿದರು.
ಕಲೆಗೆ ಜಾತಿ-ಮತ, ಬಡವ-ಬಲ್ಲಿದನೆಂಬ ಬೇಧವಿಲ್ಲ. ಕಲೆಯಿಂದ ಮನಸ್ಸಿಗೆ ಸಂತಾಸದಾಯಕವಾಗುವುದರ ಜೊತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ. ಸರ್ವರಿಗೂ ಸಮಪಾಲು, ಸಮಬಾಳು ತತ್ವದ ನೆಲೆಯಲ್ಲಿ ಧರ್ಮಸ್ಥಳದಲ್ಲಿ ಹೆಗ್ಗಡೆಯವರು ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಅವರು ಶ್ಲಾಘಿಸಿದರು.


ಶಾಂತಿವನ ಟ್ರಸ್ಟ್ ಮೂಲಕ ನೀಡುತ್ತಿರುವ ಯೋಗ ಮತ್ತು ನೈತಿಕ ಶಿಕ್ಷಣ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ. ಧರ್ಮಸ್ಥಳವು ಮೌಲ್ಯಾಧಾರಿತ ಮಾನವೀಯ ಶಿಕ್ಷಣ ನೀಡುವ ವಿಶ್ವ ಮಾನ್ಯ ವಿಶ್ವವಿದ್ಯಾಲಯ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ದೇವರು ಅಂದರೆ ನಂಬಿಕೆ. ಆದರೆ ಮೂಡನಂಬಿಕೆ ಸಲ್ಲದು. ಅಂತರಂಗ ಮತ್ತು ಬಹಿರಂಗದಲ್ಲಿ ನಾವು ಪರಿಶುದ್ಧರಾಗಿ ಕರ್ತವ್ಯ ಮಾಡಿದರೆಜೀವನ ಪಾವನವಾಗುತ್ತದೆ ಎಂದು ಅವರು ಹೇಳಿದರು.
ಶುಭಾಶಂಸನೆ ಮಾಡಿದ ಗಂಜಿಫಾ ರಘುಪತಿ ಭಟ್, ಧರ್ಮಸ್ಥಳವು ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಪಾವನ ಕ್ಷೇತ್ರವಾಗಿದೆ ಎಂದು ಹೇಳಿದರು.
ಗಂಜೀಫಾ ಕಲೆಗೆ ಹೆಗ್ಗಡೆಯವರು ನೀಡಿದ ಪ್ರೋತ್ಸಾಹ ಮತ್ತು ಬೆಂಬಲವನ್ನು ಕೃತಜ್ಞತೆಯಿಂದ ಸ್ಮರಿಸಿದರು. ವಿದೇಶೀ ಶೈಲಿಯ ಕಲೆಗಳ ವ್ಯಾಮೋಹದಿಂದ ದೇಶೀಯ ಚಿತ್ರಕಲೆ ವಿನಾಶದಂಚಿನಲ್ಲಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಕಲೆಗೆ ಅದ್ಭುತ ಶಕ್ತಿ ಇದ್ದುಕಲೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ತೃಪ್ತಿ ಸಿಗುತ್ತದೆ. ಸೃಜನಾತ್ಮಕ ಕಲೆ ಹಾಗೂ ವಾಸ್ತವಿಕ ಕಲೆಯಿಂದ ನಮ್ಮಲ್ಲಿ ಸಜ್ಜನಿಕೆ ಮತ್ತು ಉತ್ತಮ ಸಂಸ್ಕಾರ ಮೂಡಿ ಬರುತ್ತದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಅಂಚೆ-ಕುಂಚ ಸ್ಪರ್ಧೆಏರ್ಪಡಿಸಲಾಗುತ್ತದೆ. ಕಲೆಯನ್ನು ಪ್ರೀತಿಸಿ, ಗೌರವಿಸಿ, ಉಳಿಸಿ ಬೆಳೆಸಬೇಕೆಂದು ಹೆಗ್ಗಡೆಯವರು ಸಲಹೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರಕುಮಾರ್ ಶಾಂತಿವನಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಉಪಸ್ಥಿತರಿದ್ದರು.
ಯೋಗ ನಿರ್ದೇಶಕ ಶಶಿಕಾಂತ್ ಜೈನ್ ಸ್ವಾಗತಿಸಿದರು. ಮೂಡಬಿದ್ರೆ ಪ್ರಾಂತ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ಬಾಲಕೃಷ್ಣ ಧನ್ಯವಾದವಿತ್ತರು. ಬಂಟ್ವಾಳದ ಸದಾಶಿವ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.