ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ದಮಯಂತಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಬಹುಮತವಿದ್ದರೂ ಮೀಸಲಾತಿ ಅನ್ವಯ ಅಧ್ಯಕ್ಷೆ ಪಟ್ಟ ಕಾಂಗ್ರೆಸ್ ಪಕ್ಷದ ಪಾಲಾಗಿದೆ.
ಸೋಮವಾರ ವಿಟ್ಲ ಪಟ್ಟಣ ಪಂಚಾಯಿತಿನಲ್ಲಿ ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಅವರು ಚುನಾವಣೆ ನಡೆಸಿ, ಬಳಿಕ ದಮಯಂತಿ ಅವರನ್ನು ಅಧ್ಯಕ್ಷೆಯಾಗಿ ಘೋಷಣೆ ಮಾಡಿದರು.
ಕಳೆದ ಬಾರಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ 12 ಹಾಗೂ ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದುಕೊಂಡಿತ್ತು. ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಅರುಣ್ ಎಂ. ವಿಟ್ಲ ಆಯ್ಕೆಗೊಂಡಿದ್ದರು. ವರ್ಷಗಳ ಬಳಿಕ ಉಪಾಧ್ಯಕ್ಷರಾಗಿ ಜಯಂತ ನಾಯ್ಕ ಅವರು ಆಯ್ಕೆಗೊಂಡಿದ್ದರು. ಇದರ ಮಧ್ಯೆ ರಾಜ್ಯ ಸರಕಾರ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಬಿ ಮೀಸಲಾತಿ ಘೋಷಣೆ ಮಾಡಿತ್ತು. ಆದರೆ ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ ಮಹಿಳೆ ಸದಸ್ಯ ಸ್ಥಾನ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷದ ದಮಯಂತಿಗೆ ಅವಕಾಶ ಲಭಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮುಂದೆ ಚುನಾವಣೆ ನಡೆಯಲಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ದಮಯಂತಿ ಅವರು ಸರಕಾರದ ಮೀಸಲಾತಿಯಿಂದ ನನಗೆ ಇಂದು ಅಧ್ಯಕ್ಷ ಸ್ಥಾನ ದೊರಕಿದೆ. ಈ ಅಧಿಕಾರ ನನಗೆ ಒಬ್ಬಳೇ ಸೀಮಿತಗೊಳಿಸದೇ ಎಲ್ಲಾ ಸದಸ್ಯರು ಒಂದೇ ಮನೆಯ ಸದಸ್ಯರಂತೆ ಭಾವಿಸಿಕೊಂಡು ಮುನ್ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ವಿಟ್ಲದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.
ನಿರ್ಗಮನ ಅಧ್ಯಕ್ಷ ಅರುಣ್ ಎಂ. ವಿಟ್ಲ ಮಾತನಾಡಿ ತನ್ನ ಅಧಿಕಾರವಧಿಯಲ್ಲಿ ಎಲ್ಲರ ಸಹಕಾರದಲ್ಲಿ ವಿಟ್ಲವನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಮಾಡದೇ ಎಲ್ಲರೊಂದಿಗೆ ವಿಟ್ಲದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಎರಡು ವರ್ಷಗಳ ಹಿಂದೆ ವಿಟ್ಲದ ಜನತೆ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದ್ದರೂ ಕೂಡಾ ಸರಕಾರದ ಮೀಸಲಾತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಲಭಿಸಿದೆ ಎಂದರು.
ಬಳಿಕ ವಿಟ್ಲ ಮುಖ್ಯ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕ ಪ್ರಕಾಶ್, ಪ.ಪಂ. ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಚುನಾವಣೆಗೆ ಸಹಕರಿಸಿದರು.
ಪೋಟೊ-14ವಿಟಿಎಲ್-ಆಯ್ಕೆ
