ಬಂಟ್ವಾಳ: ತಾಲೂಕಿನ ದೇವಶ್ಯಪಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಂಜೂರಾದ ಇಬ್ಬರು ಶಿಕ್ಷಕರಲ್ಲಿ ಒಬ್ಬರು ಹೆರಿಗೆ ರಜೆಯಲ್ಲಿ ತೆರಳಿ ಐದು ತಿಂಗಳಾದರೂ ಪರ್ಯಾಯ ಶಿಕ್ಷಕರನ್ನು ಇನ್ನೂ ಕಲ್ಪಿಸಲಾಗಿಲ್ಲ. ಹಾಗಾಗಿ ಶಾಲೆಯ ಮುಖ್ಯ ಶಿಕ್ಷಕರು ಎಲ್ಲವನ್ನೂ ನಿಭಾಯಿಸುತ್ತಿದ್ದು, ಹೊರೆಯ ಸಜೆಯನ್ನು ಅನುಭವಿಸುತ್ತಿದ್ದಾರೆ.
ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಶ್ಯಪಡೂರು ಗ್ರಾಮದ ದೇವಶ್ಯಪಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯೊಬ್ಬರು ಹೆರಿಗೆ ರಜೆ ನಿಮಿತ್ತ ಮಾರ್ಚ್ ನಲ್ಲಿ ತೆರಳಿದ್ದರು.
ಈ ವರ್ಷ ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಎರಡು ತಿಂಗಳಾದರೂ, ಯಾವುದೇ ಶಿಕ್ಷಕರನ್ನು ನಿಯೋಜನೆ ಮಾಡಲಾಗಿಲ್ಲ. ಇದರಿಂದಾಗಿ ಮಕ್ಕಳ ಪಠ್ಯ ಚಟುವಟಿಕೆಗೆ ತೊಡಕುಂಟಾಗಿದ್ದು, ಶಾಲೆಗೆ ಭೇಟಿ ಕೊಡುವ ಸ್ಥಳೀಯ ಕ್ಲಸ್ಟರ್ ಮುಖ್ಯಸ್ಥರು ಗಮನಿಸಿಲ್ಲ ಎಂದು ಆರೋಪಿಸಲಾಗಿದೆ.

ಸಾರ್ವಜನಿಕವಾಗಿ ವ್ಯಕ್ತವಾದ ದೂರಿನ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಂಪನ್ಮೂಲ ಕೇಂದ್ರದ ಪದಾಧಿಕಾರಿಗಳು ಶಿಕ್ಷಕರ ಕೊರತೆಯಿಂದಾಗಿ ಉಂಟಾದ ಸಮಸ್ಯೆಯನ್ನು ಶಿಕ್ಷಣಾಧಿಕಾರಿಗಳ ಗಮನ ಸೆಳೆದಿದ್ದು, ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕರನ್ನು ನಿಯೋಜಿಸುವಂತೆ ಆಗ್ರಹಿಸಿದೆ.
ಯಾವುದೇ ಶಿಕ್ಷಕರು ಸುದೀರ್ಘ ರಜೆಯಲ್ಲಿ ತೆರಳಿದಾಗ ಸಂಬಂಧಿತ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ, ಸ್ಥಳೀಯ ಶಿಕ್ಷಕರನ್ನು ನಿಯೋಜಿಸಬೇಕು. ಆದರೆ ದೇವಶ್ಯಪಡೂರು ಶಾಲೆಯ ಮಾಹಿತಿ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶಾಲಾ ವಾಸ್ತವ ವಿಚಾರವನ್ನು ತಿಳಿದು ಪರಿಹಾರ ಕ್ರಮ ಕಂಡು ಕೊಳ್ಳಬೇಕಾಗಿದೆ ಎಂದು ಬಾಲ ನ್ಯಾಯ ಮಂಡಳಿ ಸದಸ್ಯ ಉಮೇಶ್ ನಿರ್ಮಲ್ ತಿಳಿದ್ದಾರೆ.
ಶಿಕ್ಷಕರನ್ನು ನೇಮಿಸಿ:
ಮಕ್ಕಳ ಹಕ್ಕುಗಳ ಸಂರಕ್ಷಣೆಯನ್ನು ಗಮನಿಸಿಕೊಂಡು, ಶಾಲೆಗೆ ತಕ್ಷಣ ಶಿಕ್ಷಕರನ್ನು ನಿಯೋಜಿಸಬೇಕು. ಈ ಸಂಬಂಧ ಶಾಲಾಭಿವೃದ್ದಿ ಸಮಿತಿಯ ಜತೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದಾಗಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರಧಾನ ಕಾರ್ಯದರ್ಶಿ ಎ.ಕೆ.ಹ್ಯಾರೀಸ್ ಪ್ರತಿಕ್ರಿಯಿಸಿದ್ದಾರೆ.