ಬೆಂಗಳೂರು: ರಾಜ್ಯದಲ್ಲಿ ಕಲಬುರ್ಗಿಯಲ್ಲಿ ಕೊರೊನಾದಿಂದ ವೃದ್ದರೋರ್ವರ ಸಾವು ಸಂಭವಿಸಿದೆ.
ಕಲ್ಬುರ್ಗಿಯಲ್ಲಿ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 17ಕ್ಕೇರಿದರೆ. ಕಲ್ಬುರ್ಗಿ ಜಿಲ್ಲೆಯಲ್ಲೇ ನಾಲ್ಕು ಸಾವುಗಳಾಗಿವೆ.

80 ವರ್ಷದ ವೃದ್ಧ ಕಳೆದ ಮೂರು ವರ್ಷಗಳಿಂದ ಕಾರ್ಕಿನ್ಸ್ ನನಿಂದ ಬಳಲುತ್ತಿದ್ದರು. ಮೊನ್ನೆ ಜ್ವರ ಇದ್ದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಬೆಳಗ್ಗೆ 9 ಗಂಟೆಗೆ ಅವರು ಮೃತಪಟ್ಟಿದ್ದು, ನಿನ್ನೆ ರಾತ್ರಿ ಪ್ರಯೋಗಾಲಯದ ಪರೀಕ್ಷಾ ವರದಿ ಬಂದಿದೆ. ವರದಿಯಲ್ಲಿ ವೃದ್ಧರಿಗೆ ಕೊರೊನಾ ಸೋಂಕಿರುವುದು ಖಚಿತವಾಗಿದೆ ಎಂದು ಸರ್ಕಾರ ಸ್ಪಷ ಪಡಿಸಿದೆ.
ಇಂದು ಬೆಳಗ್ಗೆ ಟ್ವಿಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು, ಕಲ್ಬುರ್ಗಿಯಲ್ಲಿ ಸಾವನ್ನಪ್ಪಿದವರಿಗೆ ಸೋಂಕಿರುವುದು ಖಚಿತ ಪಟ್ಟಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಮಾ 13ರಂದು ದೇಶದಲ್ಲಿ ಮೊದಲ ಕೊರೊನಾ ಸಾವಾಗಿತ್ತು. ಅದು ಕಲ್ಬುರ್ಗಿ ಜಿಲ್ಲೆಯಲ್ಲೇ ನಡೆದಿತ್ತು. ಸೌದಿ ಪ್ರವಾಸ ಮುಗಿಸಿ ಬಂದಿದ್ದ 70 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಅನಂತರ ಏಪ್ರಿಲ್ 7ರಂದು 65 ವರ್ಷದ ವ್ಯಕ್ತಿ, ಏಪ್ರಿಲ್14ರಂದು 55 ವರ್ಷದ ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದರು. ದೆಹಲಿಗೆ ಹೋಗಿ ಬಂದಿದ್ದ ವ್ಯಕ್ತಿಯ ಜೊತೆಗಿನ ಸಂಪರ್ಕದಿಂದ ಈತನಿಗೆ ಸೋಂಕು ತಗುಲಿತ್ತು.
ಇಂದು ಮತ್ತೊಂದು ಸಾವಾಗುವ ಮೂಲಕ ಕಲ್ಬುರ್ಗಿಯಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು ಸಾವುಗಳಲ್ಲಿ 17ರಲ್ಲಿ ನಾಲ್ಕು ಕಲ್ಬುರ್ಗಿಯಲ್ಲೇ ಸಂಭವಿಸಿವೆ. ಅತಿ ಹೆಚ್ಚು ಸಾವುಗಳಾಗಿರುವ ಜಿಲ್ಲೆ ಎಂಬ ಅಪಕೀರ್ತಿಯೂ ಕಲ್ಬುರ್ಗಿ ಜಿಲ್ಲೆಗೆ ಅಂಟಿಕೊಂಡಿದೆ.
ಕಲ್ಬುರ್ಗಿ, ಬೆಂಗಳೂರು ನಂತರದಲ್ಲಿ ಚಿಕ್ಕಬಳ್ಳಾಪುರದಲ್ಲೇ ಹೆಚ್ಚು ಸಾವುಗಳು ಸಂಭವಿಸಿವೆ. ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಮೂರು ಸಾವುಗಳಾಗಿವೆ. ವಿಜಯಪುರದಲ್ಲಿ ಎರಡು, ತುಮಕೂರು, ಬಾಗಲಕೋಟೆ, ಬೆಳಗಾವಿ, ಗದಗ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವು ಸಂಭವಿಸಿವೆ.

