ಬೆಳ್ತಂಗಡಿ: ಹೊಟ್ಟೆ ನೋವಿನಿಂದ ಅಕ್ಕಪಕ್ಕದ ಮನೆಯ ಇಬ್ಬರು ಯುವತಿಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸಂಭವಿಸಿದೆ


ಪಟ್ರಮೆ ಗ್ರಾಮದ ಪಟ್ಟೂರು ಬಾಬು ಅವರ ಪುತ್ರಿ ರಕ್ಷಿತಾ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮುಂಜಾನೆ ಮೃತಪಟ್ಟರೆ, ನೆರೆ ಮನೆಯವರಾದ ಶ್ರೀನಿವಾಸ ಆಚಾರ್ಯ ಅವರ ಪುತ್ರಿ ಲಾವಣ್ಯ ಮಧ್ಯಾಹ್ನ ಮೃತಪಟ್ಟರೆನ್ನಲಾಗಿದೆ. ಇವರಲ್ಲಿ ರಕ್ಷಿತಾ ವಿಷ ಪದಾರ್ಥ ಸೇವಿಸಿರುವುದು ಮರಣೋತ್ತರ ಪರಿಕ್ಷೆಯಲ್ಲಿ ದೃಢಪಟ್ಟಿದೆ. ಲಾವಣ್ಯಾ ಸಾವಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಎ.4ರಂದು ಸಂಜೆ ರಕ್ಷಿತಾ ಮತ್ತು ಲಾವಣ್ಯ ಮನೆಯಲ್ಲಿ ಹೊಟ್ಟೆ ನೋವೆಂದು ಹೇಳಿ ನರಳಾಡಿ ತೀವ್ರ ಅಸ್ವಸ್ಥಗೊಂಡಿದ್ದರು. ಇಬ್ಬರನ್ನು ಸ್ಥಳೀಯರ ಸಹಕಾರದಲ್ಲಿ ನೆಲ್ಯಾಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ರಕ್ಷಿತಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮನೆಯವರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಲಾವಣ್ಯರನ್ನು ಅವರ ಮನೆಯವರು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಬಳಿಕ ಸುರತ್ಕಲ್‌ನ ಆಸ್ಪತ್ರೆಗೆ ದಾಖಲಿಸಿದ್ದರು.
ಅಕ್ಕಪಕ್ಕದ ಮನೆಯವರಾದ ಇಬ್ಬರೂ ಸ್ನೇಹಿತೆಯರಾಗಿದ್ದು, ಇವರಿಬ್ಬರು ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಕ್ಷಿತಾ ಒಂದೂವರೆ ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಇನ್ನೇನಾದರೂ ಘಟನೆ ಸಂಭವಿಸಿದೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಇನ್ನು ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












