ಬಂಟ್ವಾಳ: ಜಿಲ್ಲಾಧಿಕಾರಿಗಳ ಆದೇಶವನ್ನು ಮೀರಿ ಸಜಿಪನಡು ಗ್ರಾಮದ ಕಂಚಿನಡ್ಕದವು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಂಟ್ವಾಳ ಪುರಸಭೆಯವರು ಹಸಿಕಸವನ್ನು ಸಾಗಿಸುವುದನ್ನು ವಿರೋಧಿಸಿ ಸಜಿಪನಡು ಗ್ರಾಮಪಂಚಾಯತ್ ನೇತೃತ್ವದಲ್ಲಿ ಬಂಟ್ವಾಳ ಪುರಸಭೆಯ ಮುಂಭಾಗ ಅ.7 ರ ಗುರುವಾರ ಬೆಳಿಗ್ಗೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಜಿಪನಡು ಗ್ರಾಮಪಂಚಾಯತ್ ಅಧ್ಯಕ್ಷೆ ಫೌಝಿಯಾ ಬಾನು ಹೇಳಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2007-08 ರಿಂದಲೇ ಈ ಘಟಕದ ಬಗ್ಗೆ ಗ್ರಾಮಪಂಚಾಯತ್ ನಿಂದ ವಿರೋಧ ವ್ಯಕ್ತವಾಗಿತ್ತು, 8 ಸಲ ಗ್ರಾಮಪಂಚಾಯತ್ ಸಾಮಾನ್ಯಸಭೆಯಲ್ಲಿ, ಐದು ಸಲ ಗ್ರಾಮಸಭೆಯಲ್ಲಿ ತ್ಯಾಜ್ಯ ಘಟಕವನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿತ್ತು.ವಾಹನವನ್ನು ತಡೆದು ಪ್ರತಿಭಟನೆಯನ್ನೂ ನಡೆಸಲಾಗಿತ್ತು. ವಿಧಾನಸಭೆಯಲ್ಲೂ ಕ್ಷೇತ್ರದ ಶಾಸಕರು ವಿಚಾರಮಂಡಿಸಿ ಸಭಾಧ್ಯಕ್ಷರ ತೀರ್ಮಾನದಂತೆ ಬಂಟ್ವಾಳ ಹಾಗೂ ಮಂಗಳೂರು ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಜಿಲ್ಲಾಧಿಕಾರಿಯವರು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯವರಿಗೆ ಒಣಕಸ ಮಾತ್ರ ಹಾಕಬೇಕು ಹಸಿ ಕಸವನ್ನು ಹಾಕಲೇ ಬಾರದು ಎಂದು ಖಡಕ್ ಆದೇಶವನ್ನು ನೀಡಿದ್ದಾರೆ. ಆದರೆ ಬಂಟ್ವಾಳ ಪುರಸಭೆಯಿಂದ ಹಸಿಕಸವನ್ನು ಸದರಿ ತ್ಯಾಜ್ಯ ಘಟಕಕ್ಕೆ ತಂದು ಸುರಿದು ಈ ಪರಿಸರದಲ್ಲಿ ದುರ್ನಾತ ಬೀರಿ ಸಾರ್ವಜನಿಕರಿಗೆ ಸಂಕಷ್ಟವನ್ನು ಉಂಟು ಮಾಡುತ್ತಿದ್ದು, ಸಾರ್ವಜನಿಕರ ಆರೋಗ್ಯದಲ್ಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಪುರಸಭೆಯ ದಬ್ಬಾಳಿಕೆ ಮತ್ತು ಜಿಲ್ಲಾಧಿಕಾರಿ ಆದೇಶವನ್ನು ನಿರ್ಲಕ್ಷಿಸುವವರ ವಿರುದ್ಧ ವಿನೂತನ ವಿಶಲ್ ಮಾರ್ಚ್‌ನೊಂದಿಗೆ ಬೃಹತ್ ಕಪ್ಪು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ನಾಸೀರ್‌ರವರು ಮಾತನಾಡಿ, ಗ್ರಾಮಸ್ಥರ ಅಹವಾಲುಗಳಿಗೆ ಮನ್ನಣೆ ಸಿಗದೇ ಇದ್ದರೆ ಉಗ್ರಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಎನ್.ಅಬ್ದುಲ್ ರಹಿಮಾನ್ ಸದಸ್ಯರುಗಳಾದ ಇಸ್ಮಾಯಿಲ್ ಗೋಳಿಪಡ್ಪು ಉಪಸ್ಥಿತರಿದ್ದರು


