ಬಂಟ್ವಾಳ: ಶೈಕ್ಷಣಿಕ ವರ್ಷ ಪ್ರಾರಂಭವಾದ ತಿಂಗಳಲ್ಲೇ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ಮುಗಿಯುತ್ತಾ ಬಂದಿದ್ದರೂ ಸರಕಾರಿ ಶಾಲೆಗಳಿಗೆ ಈವರೆಗೂ ಸೈಕಲ್ ವಿತರಣೆಯಾಗಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸಿದೆ.
ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ಮತ್ತೆ ಸರಕಾರಿ ಶಾಲೆಗಳತ್ತ ಆಕರ್ಷಿಸಲು ಹಾಗೂ ಕೆಲವು ಕಡೆ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸರಕಾರ ಸೈಕಲ್ ಯೋಜನೆ ಜಾರಿಗೊಳಿಸಿತ್ತು. ಯೋಜನೆ ಜಾರಿಯಾಗಿದ್ದರಿಂದ ಕಳೆದ ಸಾಲಿನ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ನೀಡುತ್ತಾ ಬರುತ್ತಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಸೈಕಲ್‌ಗಳು ಸುಮಾರು ಮೂರು ತಿಂಗಳುಗಳಿಂದ ಕಲ್ಲಡ್ಕ ಹಾಗೂ ಮುಡಿಪು ಸರಕಾರಿ ಶಾಲೆಯಲ್ಲೇ ಉಳಿದುಕೊಂಡಿದೆ. ಇದರಿಂದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಸೈಕಲ್ ಭಾಗ್ಯದಿಂದ ವಂಚಿತರಾಗಿದ್ದಾರೆ.
ಸರಕಾರವು ಈ ಯೋಜನೆಯ ಗುತ್ತಿಗೆಯನ್ನು ಹಿರೋ ಕಂಪೆನಿಗೆ ನೀಡಿದ್ದು ಎನ್ನಲಾಗಿದ್ದು, ಈ ಕಂಪೆನಿಯ ಸುಮಾರು ೪ ಸಾವಿರ ಸೈಕಲ್‌ಗಳನ್ನು ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ಈ ವರ್ಷ ಮಂಜೂರು ಮಾಡಿತ್ತು. ಅದರಂತೆ ಕಲ್ಲಡ್ಕ ಸರಕಾರಿ ಶಾಲೆ ಹಾಗೂ ಮುಡಿಪು ಸರಕಾರಿ ಶಾಲೆಯ ಮೈದಾನಕ್ಕೆ ಸೈಕಲ್‌ಗಳ ಬಿಡಿಭಾಗಗಳನ್ನು ತಂದು ಹಾಕಿಸಿ, ಅದನ್ನು ಜೋಡಿಸುವ ಕಾರ್ಯಕ್ಕೆ ಕಾರ್ಮಿಕರನ್ನು ನೇಮಿಸಿ ಕೆಲಸ ಮಾಡಿಸಿತ್ತು. ಜೋಡಿಸುವ ಕೆಲಸ ಪೂರ್ಣಗೊಂಡು ಸುಮಾರು ಮೂರು ತಿಂಗಳಾಗುತ್ತಾ ಬಂದರೂ ಸೈಕಲ್‌ಗಳು ಮಾತ್ರ ವಿದ್ಯಾರ್ಥಿಗಳಿಗೆ ವಿತರಣೆಯಾಗದೆ ಇನ್ನೂ ಅದೇ ಸ್ಥಳದಲ್ಲಿದ್ದು, ತುಕ್ಕು ಹಿಡಿಯುತ್ತಿದೆ ಎಂದು ಶಿಕ್ಷಣಾಭಿಮಾನಿಗಳು ಆರೋಪಿಸಿದ್ದಾರೆ.

ವಿತರಣೆಗೆ ಸರಕಾರ ಆದೇಶಿಸಿದರೆ ಶೀಘ್ರದಲ್ಲೆ ವಿತರಣೆ:
ರಾಜ್ಯದ ಕೆಲವೆಡೆ ಈ ವರ್ಷ ವಿತರಿಸಿದ ಸೈಕಲ್‌ಗಳು ದೋಷಪೂರಿತ ಹಾಗೂ ಕಳಪೆ ಗುಣ ಮಟ್ಟದ ಬಗ್ಗೆ ಇಲಾಖೆಗೆ ದೂರುಗಳು ಹೋದ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲಿಸಿದ ಬಳಿಕವೆ ಸೈಕಲ್‌ಗಳನ್ನು ವಿತರಿಸಬೇಕೆಂದು ಸರಕಾರ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ನೀಡಿದ್ದರಿಂದ ಬಂಟ್ವಾಳ ತಾಲೂಕಿನ ಸೈಕಲ್‌ಗಳ ವಿತರಣೆಯನ್ನು ತಡೆಹಿಡಿಯಲಾಗಿದೆ. ಸರಕಾರದ ಆದೇಶದಂತೆ ಇಲಾಖೆಯ ತಂಡವು ಈಚೆಗೆ ಕಲ್ಲಡ್ಕ ಹಾಗೂ ಮುಡಿಪು ಶಾಲೆಗೆ ತೆರಳಿ ಸೈಕಲ್‌ಗಳ ಗುಣಮಟ್ಟ ಪರಿಶೀಲಿಸಿ, ಮೇಲಾಧಿಕಾರಿಗಳಿಗೆ ವರದಿ ನೀಡಿದೆ. ಸೈಕಲ್‌ಗಳ ವಿತರಣೆಗೆ ಸರಕಾರ ಆದೇಶ ಬಂದ ಕೂಡಲೇ ವಿತರಣೆ ಮಾಡಲಾಗುವುದು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅವರು ಮಾಹಿತಿ ನೀಡಿದ್ದಾರೆ.
ನವಂಬರ್ ತಿಂಗಳಲ್ಲಿ ಕಲ್ಲಡ್ಕ ಸರಕಾರಿ ಶಾಲೆಯ ಆಟದ ಮೈದಾನದಲ್ಲಿ ಸೈಕಲ್ ಬಿಡಭಾಗಗಳನ್ನು ತಂದು ಜೋಡಿಸುವ ಕಾರ್ಯ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯ ಮಾಡಿಲ್ಲ. ಅಲ್ಲದೆ, ಸೈಕಲ್‌ನ ಬಿಡಿಭಾಗಗಳನ್ನು ಸರಿಯಾಗಿ ಜೋಡಣೆ ಮಾಡಿಲ್ಲ. ಬಹುತೇಕ ಸೈಕಲ್‌ಗಳು ಇಲ್ಲಿನ ವಾತಾರಣಕ್ಕೆ ತಕ್ಕು ಹಿಡಿದರೆ, ಮತ್ತೆ ಕೆಲವು ಮಣ್ಣು ಹಿಡಿದಿದೆ. ಇಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಸೈಕಲ್‌ಗಳನ್ನು ಜೋಡಿಸಿಟ್ಟಿರುವುದರಿಂದ ಮಕ್ಕಳಿಗೆ ಆಟವಾಡಲು ತೊಂದರೆಯಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಆದಷ್ಟು ಬೇಗ, ಗುಣಮಟ್ಟವುಳ್ಳ ಸೈಕಲ್ ಅನ್ನು ವಿತರಣೆ ಮಾಡಬೇಕಾಗಿದೆ ಎಂದು ಕಲ್ಲಡ್ಕ ಶಾಲೆಯ ಹಳೆಯ ವಿದ್ಯಾರ್ಥಿ ಮುಸ್ತಫಾ ಅವರು ಮನವಿ ಮಾಡಿದ್ದಾರೆ.