ಚಿಕ್ಕಮಗಳೂರು: ಸಚಿವ ಸಿ.ಟಿ. ರವಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿಂದೆ ಪ್ರಥಮ ಪರೀಕ್ಷಯಲ್ಲಿ ಒಮ್ಮೆ ಪಾಸಿಟಿವ್ ವರದಿ ಬಂದಿದ್ದರೂ, ಎರಡನೇ ಬಾರಿ ಪರೀಕ್ಷಿಸಿದಾಗ ನೆಗೆಟಿವ್ ವರದಿ ಬಂದಿತ್ತು. ಈ ಕಾರಣದಿಂದ ಮೂರನೇ ಬಾರಿಗೆ ಪರೀಕ್ಷಿಸಿದಾಗ ಮತ್ತೇ ಕೋವಿಡ್ ಪಾಸಿಟಿವ್ ವರದಿಯಾಗಿದೆ.
ಈ ಬಗ್ಗೆ ಸ್ವತಃ ಸಚಿವ ಸಿ ಟಿ ರವಿ ಅವರು ಟ್ವೀಟ್ ಮಾಡಿದ್ದು, ಥರ್ಡ್ ಅಂಪೈರ್ ಫಲಿತಾಂಶದಲ್ಲಿ ಕೋವಿಡ್ ಪಾಸಿಟಿವ್ ಇದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಮನೆಯಿಂದಲೇ ಕೆಲಸ ಮುಂದುವರಿಸುತ್ತೇನೆ. ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.


ಎರಡು ದಿನಗಳ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಬೆಂಗಳೂರಿನಲ್ಲಿ ಮಾತನಾಡುತ್ತಾ, ಸಚಿವ ಸಿ ಟಿ ರವಿಯವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದಿದ್ದರು. ನಂತರ ಟ್ವೀಟ್ ಮಾಡಿದ ಸಿ ಟಿ ರವಿಯವರು ನನಗೆ ಕೊರೊನಾ ಸೋಂಕಿನ ಯಾವುದೇ ರೋಗ ಲಕ್ಷಣಗಳಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದಿದ್ದರು.












