ಮಂಗಳೂರು : ಉದ್ಯಮಿಯೊಬ್ಬರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಬಳಿ ನಿನ್ನೆ(ನ.15) ರಾತ್ರಿ ಸುಮಾರು 10:30 ಗಂಟೆಗೆ ನಡೆದಿದೆ.



ಮಂಗಳೂರು ನಗರದ ಹೊರವಲಯದ ಗುರುಪುರ ಕಂದಾವರ, ಕೈಕಂಬ ನಿವಾಸಿ ಅಬ್ದುಲ್ ಅಝೀಝ್ (56) ದಾಳಿಗೊಳಗಾದ ಉದ್ಯಮಿ. ಮಂಗಳೂರಿನಲ್ಲಿ ವೆನ್ಝ್ ಬಟ್ಟೆಬರೆ ಅಂಗಡಿ ಹೊಂದಿರುವ ಅಝೀಝ್ ಕಂದಾವರ ಮಸೀದಿಯ ಆಡಳಿತ ಕಮಿಟಿಯಲ್ಲೂ ಸಕ್ರಿಯರಾಗಿದ್ದರು.
ರಾತ್ರಿ ಸುಮಾರು 10:30ರ ವೇಳೆಗೆ ಅಝೀಝ್ ಮಸೀದಿಯಲ್ಲಿ ನಮಾಝ್ ಮಾಡಿ ತಮ್ಮ ನಿವಾಸಕ್ಕೆ ವಾಪಾಸ್ ಆಗಲು ತನ್ನ ಕಾರು ಇರಿಸಿದ್ದ ಜಾಗಕ್ಕೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಇಬ್ಬರು ಯುವಕರು ಅಝೀಝ್ ಅವರ ತಲೆ, ಕೈ, ಕಾಲಿಗೆ ತಲವಾರಿನಿಂದ ದಾಳಿ ನಡೆಸಿದ್ದು ಬಳಿಕ ಪರಾರಿಯಾಗಿದ್ದಾರೆ ಎನ್ನಲಾಗಿದೆ. ವೈಯಕ್ತಿಕ ದ್ವೇಷದಿಂದ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.
ದಾಳಿ ನಡಸಿದ ಘಟನೆಯ ವೀಡಿಯೊ ಮಸೀದಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡ ಅಝೀಝ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.












