Tuesday, July 8, 2025

ಕೋವಿಡಾಯಣ-3

ಕೋವಿಡ್-19 ಎಲ್ಲರನ್ನೂ ಹತ್ತಿರಗೊಳಿಸಿದೆ. ಜಾತಿ ಮತ ಪಂಥಗಳನ್ನು ಗಮನಿಸದೆ, ಸಾಮಾಜಿಕ ವರ್ಗಗಳನ್ನೂ ಲೆಕ್ಕಿಸದೆ ಜನರೆಲ್ಲರೂ ಏಕ ಮನಸ್ಕರೋ ಸಹಮನಸ್ಕರೋ ಆಗಿರುವುದು ಕೋವಿಡ್‌ನ ವರಪ್ರಸಾದವೆಂದೇ ಹೇಳಬಹುದು. ಕೋವಿಡ್‌ನ ಸಂಕಷ್ಟಕಾಲದಲ್ಲಿ ಅಸಂಖ್ಯ ಕುಟುಂಬಗಳು ಹೊಟ್ಟೆಯ ಹಿಟ್ಟಿಗೂ ಒದ್ದಾಡಿದ್ದಾರೆ. ಇಂತಹ ದಾರುಣ ಸಂದರ್ಭದಲ್ಲಿ ಉಳ್ಳವರು ಇಲ್ಲದವರಿಗೆ ಅಗತ್ಯ ವಸ್ತುಗಳನ್ನು ವೈಯಕ್ತಿಕವಾಗಿಯೋ, ಸಂಘಟನೆಗಳ ಮೂಲಕವೋ ವಿತರಿಸಿ ಹೃದಯವೈಶಾಲ್ಯವನ್ನು ಜಾಹೀರುಗೊಳಿಸಿದ್ದಾರೆ. ಎಲ್ಲರ ಕಷ್ಟಗಳನ್ನೂ ತಮ್ಮ ಕಷ್ಟಗಳೆಂದೇ ಪರಿಗಣಿಸುವುದರ ಮೂಲಕ ಸೋತಾಗ ನಾವೆಲ್ಲರೂ ಒಂದೇ ಎಂದು ಸಾಬೀತು ಪಡಿಸಿದ್ದಾರೆ. ಸಹಕಾರ ಪಡೆದವರು ತಮ್ಮನ್ನು ತಾವೇ ಕೀಳಾಗಿ ಗುರುತಿಸದಂತೆ ಅವರಲ್ಲಿ ಆತ್ಮವಿಶ್ವಾಸವನ್ನು ಬಲಗೊಳಿಸಿದ್ದಾರೆ.
ದೈನಂದಿನ ಪತ್ರಿಕೆಗಳ ಪುಟಗಳನ್ನರಳಿಸಿದಂತೆ ಒಂದಲ್ಲ ಒಂದು ರೀತಿಯ ಹಿಂಸೆ, ಕೋಮು ಗಲಭೆ, ದರೋಡೆಗಳ ವರದಿಗಳಿಲ್ಲದ ದಿನಗಳು ಅಪರೂಪವಾದರೆ, ಕೋವಿಡ್ ಇಂತಹ ವರದಿಗಳನ್ನು ಮಾಯಗೊಳಿಸಿದೆ. ಇದರರ್ಥ ವರದಿಯಾಗದೆ ಮಾಯವಾಗುತ್ತಿತ್ತೆಂದಲ್ಲ, ಅಂತಹ ಸಾಮಾಜಿಕ ಅನಿಷ್ಟಗಳು ಉಂಟಾಗುವುದು ಅಪರೂಪವಾಯಿತೆಂದೇ ತಿಳಿಯಬೇಕು. ಕೋಮು ಸಹಮತವೂ ಸಂಕಷ್ಟಗಳ ಪರಿಹಾರಕ ಎಂಬ ಭಾವನೆ ಬೀಜಾಂಕುರವಾಗಲು ಕೋವಿಡ್ ಕಾರಣವಾಯಿತು.
ಕೋವಿಡ್ ಸಾವಿನ ವರದಿಗಳು ಬರುತ್ತಿದ್ದಂತೆ ನಿತ್ಯ ಇತರೆ ರೀತಿಯ ಸಾವುಗಳು ಬಹಳ ಇಳಿಕೆಯಾಗತೊಡಗಿದುವು. ಅಪಘಾತಗಳಿಂದಾಗುವ ಸಾವು ಬಹಳ ಅಪರೂಪವಾಯಿತು. ಅಪಘಾತದ ಸಾವು ಇಳಿಯಲು ಕೋವಿಡ್ ನೇರವಾಗಿಯೇ ಕಾರಣವಾಗಿರುವುದು ಶತಃ ಸತ್ಯ. ದಿನಾ ಆಸ್ಪತ್ರೆಗಳು ಜನಜಂಗುಳಿಯ ತಾಣಗಳು. ಒಬ್ಬರೋಗಿ ದಾಖಲಾದರೆ ಅವನನ್ನು ನೋಡಲು ಬರುವ ಸಂಬಂಧಿಗಳು, ಹಿತೈಷಿಗಳು, ನೆರೆಹೊರೆಯವರು, ಆತ್ಮೀಯರು ಒಂದೆಡೆಯಾದರೆ ಸಂಗಡಿಗರಾಗಿ ಉಳಿಯ ಬರುವವರು ಇನ್ನೊಂದೆಡೆ. ಕೊರೋನಾ ಜಾಗೃತಿಯ ಕಾರಣಕ್ಕಾಗಿ ದಾಖಲಾಗುವ ರೋಗಿಗಳ ಸಂಖ್ಯೆಯು ಇಳಿದ ಕಾರಣದಿಂದಾಗಿ ಆಸ್ಪತ್ರೆಗಳ ಆರೋಗ್ಯ ಪರಿಸರ ಉತ್ತಮವಾಯಿತು. ಒಂದೊಮ್ಮೆ ರೋಗಿಯೊಬ್ಬ ಅತ್ಯಗತ್ಯವಾಗಿ ಆಸ್ಪತ್ರೆಗೆ ದಾಖಲಾದರೂ ಸಂಗಡಿಗರಾಗಿ ಒಬ್ಬರು ಇರುತ್ತಿದ್ದರೇ ವಿನಹ ಕುಶಲ ವಿಚಾರಕರ ಸಂಖ್ಯೆಯು ಸೊನ್ನೆಯಾಯಿತು. ಇದರಿಂದಾಗಿ ಆಸ್ಪತ್ರೆಗಳಲ್ಲಿ ಆಗುತ್ತಿದ್ದ ಕಿರಿಕಿರಿ ಇಳಿತಾಯವಾಯಿತು. ಸಣ್ಣ ಪುಟ್ಟ ಕಾಯಿಲೆಗೂ ಆಸ್ಪತ್ರೆಗೆ ದಾಖಲಾಗಿ ಜನ ಜಮಾಯಿಸುವ ತೊಂದರೆಯ ನಿಗ್ರಹದಲ್ಲಿ ಕೋವಿಡ್ ಕೈವಾಡ ಇದ್ದೇ ಇದೆ.
ಹಾಗೆಂದು ಕೋವಿಡ್ ಹೊಗಳಿಕೆಗೆ ಪ್ರಶಸ್ತವೆಂಬ ವಾದವಲ್ಲ. ಕೋವಿಡ್-19 ವಿಪತ್ತಿನ ಮಹಾ ಕೂಪವೇ ಸರಿ. ಪ್ರಪಂಚದ ಎಲ್ಲ ವಯೋಮಾನದ ಜನರ ಹೃದಯದಲ್ಲಿ ಭಯವನ್ನು ಮೂಡಿಸಿದ ಇತ್ತೀಚೆಗಿನ ರೋಗಗಳಲ್ಲಿ ಅತ್ಯಂತ ನೀಚವೆನ್ನಿಸಿದ ಸಾಂಕ್ರಾಮಿಕ ರೋಗ. ಇದು ಭಾರತವನ್ನು ಕಂಗೆಡಿಸದಂತೆ ವಿಶೇಷ ಪ್ರಯತ್ನಗಳಾದರೂ ನಿರೀಕ್ಷಿತ ಫಲ ಕೂಡಿ ಬರಲಿಲ್ಲ. ಈ ವಿಫಲತೆಗೆ ನಾವು ಹೊಣೆಗಾರರನ್ನು ಬೆಟ್ಟು ಮಾಡಿ ಹೊಣೆಗೇಡಿಗಳಾಗುವುದು ಸೂಕ್ತವಲ್ಲ. ಹಾಗೆಯೇ ಯಾರನ್ನೂ ಆರೋಪಿಯನ್ನಾಗಿ ಕಾಣುವುದೂ ಮಾನವೀಯತೆಯಲ್ಲ. ಈ ಕಾಯಿಲೆ ಮಾನವನಿಗೆ ಪ್ರಕೃತಿಯು ನೀಡಿದ ಶಿಕ್ಷೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಆಗಬೇಕಾಗಿದೆ. ನಮ್ಮ ಸ್ವಾರ್ಥಪರವಾದ ಕ್ರಮಗಳು ನಮ್ಮನ್ನೇ ಬಲಿತೆಗೆದುಕೊಳ್ಳುತ್ತಿವೆ. ಆದುದರಿಂದ ಇನ್ನಾದರೂ ಪರಿಸರದ ಸ್ವಚ್ಛತೆ, ಹಸಿರ ಮಡಿಲನ್ನು ಸಂಪನ್ನಗೊಳಿಸುವ ಹಾಗೂ ಎಲ್ಲ ಮಾಲಿನ್ಯಗಳಿಂದ ಮುಕ್ತವಾದ ಗಾಳಿ, ನೀರು, ಆಹಾರಗಳನ್ನು ಹೊಂದುವ ನಿಟ್ಟಿನಲ್ಲಿ ನಮ್ಮಲ್ಲಿ ಪರಿಸರ ಪರ ಕಾಳಜಿ ಬಲಗೊಳ್ಳಬೇಕು.
.. ಮುಂದುವರಿಯುತ್ತದೆ.

ಲೇ: ರಮೇಶ ಎಂ ಬಾಯಾರು ಎಂ.ಎ, ಬಿಎಡ್,

More from the blog

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...

ಪ್ರೀಮಾ ಡಿಸೋಜರವರಿಗೆ ಪಿಎಚ್. ಡಿ. ಪದವಿ..

ಬಂಟ್ವಾಳ : ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ....

ಸರಕಾರಿ ಕಿ. ಪ್ರಾ. ಶಾಲೆ ಏಮಾಜೆ : ‘ಅಕ್ಷಯ ಪಾತ್ರೆ’ ಕಾರ್ಯಕ್ರಮ ಉದ್ಘಾಟನೆ..

ಬಂಟ್ವಾಳ : ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಸೇವನೆಯ ಅವಶ್ಯಕತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರವು ಪೋಷಣಾ ಅಭಿಯಾನವನ್ನು ಜಾರಿಗೊಳಿಸಿದೆ. ಆ ಪ್ರಯುಕ್ತವಾಗಿ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ದ. ಕ. ಜಿ....

ಬೊಂಡಾಲದಲ್ಲಿ ಉತ್ಸಾಹಿ ಉಚಿತ ಕಣ್ಣಿನ ತಪಸಣಾ ಶಿಬಿರ..

ಬಂಟ್ವಾಳ :ಉತ್ಸಾಹಿ ತರುಣ ವ್ರೃಂದ(ರಿ) ಬೊಂಡಾಲ ಹಾಗೂ ಕಾಮತ್ ಒಪ್ಟಿಕಲ್ಸ್, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಸಣಾ ಶಿಬಿರ ನಡೆಯಿತು. ಊರಿನ ಅನೇಕ ಹಿರಿಯರು, ಮಹಿಳೆಯರು ಹಾಗೂ ನಾಗರಿಕ ಬಂಧುಗಳು ಇದರ...