ಮಂಗಳೂರು : ಮನುಕುಲಕ್ಕೆ ಆಘಾತ ನೀಡಿ, ಆರ್ಥಿಕ ಸ್ಥಿತಿ-ಗತಿಯನ್ನು ಏರು-ಪೇರು ಮಾಡಿದ ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಕರ್ನಾಟಕ ಲೋಕಾಯುಕ್ತರಾದ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ನ.15ರ ಸೋಮವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಕೋವಿಡ್ ನಿರ್ವಹಣೆ ಹಾಗೂ ಲೋಕಾಯುಕ್ತ ಪ್ರಕರಣಗಳ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಲಸಿಕೆಯ ಮೊದಲ ಡೋಸ್‍ಅನ್ನು ಜಿಲ್ಲೆಯಲ್ಲಿ ಶೇಕಡ 90ರಷ್ಟು ಹಾಗೂ ಎರಡನೇ ಡೋಸ್ ಅನ್ನು ಶೇ.59 ಮಂದಿ ಪಡೆದಿದ್ದಾರೆ, ಮೊದಲ ಡೋಸ್‍ನಲ್ಲಿ ಇನ್ನೂ ಉಳಿದ ಶೇ. 10ರಷ್ಟು ಜನರನ್ನು ಗುರುತಿಸಿ, ಆದ್ಯತೆಯ ಮೇರೆಗೆ ಅವರೆಲ್ಲರಿಗೂ ಲಸಿಕೆ ಕೊಡಿಸಬೇಕು, ಈ ಕಾರ್ಯವನ್ನು ಮುಂದಿನ 15-20 ದಿನದೊಳಗೆ ಪೂರ್ಣಗೊಳಿಸಲೇಬೇಕು, ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಲೇಬೇಕು, ಕೋವಿಡ್ ಸೋಂಕಿನಿಂದ ಹೊರಬರದೆ ಇದ್ದಲ್ಲಿ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ, ಆರ್ಥಿಕ ಸ್ಥಿತಿ-ಗತಿಗಳಿಗೆ ಹಾನಿಯಾಗುತ್ತದೆ, ಜಿಲ್ಲೆಯಲ್ಲಿ ಲಸಿಕೆಗೆ ತೊಂದರೆ ಇಲ್ಲ, ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಸೇರಿದಂತೆ ಒಟ್ಟು 1.75 ಲಕ್ಷ ಡೋಸ್‍ಗಳು ಇಂದು ಕೂಡ ಲಭ್ಯವಿದೆ ಎಂದು ಹೇಳಿದರು.
ಸ್ವತಃ ತಾವು ಕೂಡ ವ್ಯಾಕ್ಸಿನ್ ಪಡೆದಿದ್ದು, ಅದರಿಂದ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ ಅಥವಾ ಯಾವುದೇ ನ್ಯೂನತೆಗಳು ಉಂಟಾಗುವುದಿಲ್ಲ, ನಾವು ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಸೀಮಿತವಲ್ಲ, ಸಮಾಜಕ್ಕೆ ಜವಾಬ್ದಾರರಾಗಿರುತ್ತಾರೆ, ಹಾಗಾಗಿ ಕೋವಿಡ್ ನಿಯಂತ್ರಿಸಲು ಕಡ್ಡಾಯವಾಗಿ ಲಸಿಕೆಗಳನ್ನು ಪಡೆಯಲೇಬೇಕು, ಮಾಸ್ಕ್ ಧರಿಸುವುದು ಮಾತ್ರವಲ್ಲ ಅದನ್ನು ಸೂಕ್ತವಾಗಿ ಹಾಕಿಕೊಳ್ಳಬೇಕು, ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ಕಿವಿಮಾತು ಹೇಳಿದರು.
ಇದೀಗ ಶಾಲೆಗಳು ಆರಂಭಗೊಂಡಿದ್ದು, ಅಲ್ಲಿ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲನೆಯಾಗುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರ ವಹಿಸಬೇಕು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರೆ ಶಿಕ್ಷಣ ಅಧಿಕಾರಿಗಳು ಆಗಿದ್ದಾಂಗೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಹರಡದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಮಗೆ ಜಿಲ್ಲಾ ಪಂಚಾಯತ್ ಸಿಇಓ ಮೂಲಕ ವರದಿ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 1,508 ಶಾಲೆಗಳಿದ್ದು ಅವುಗಳಲ್ಲಿ 1,071 ಸರಕಾರಿ, 315 ಅನುದಾನಿತ, 400 ಅನುದಾನ ರಹಿತ, 11 ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ, 14 ಬುಡಕಟ್ಟು ಶಾಲೆಗಳು, 11 ನವೋದಯ, 2 ಕೇಂದ್ರೀಯ ವಿದ್ಯಾಲಯ ಹಾಗೂ ಒಂದು ಜವಾಹರ ನವೋದಯ ಶಾಲೆಗಳಲ್ಲಿ 3,20,980 ವಿದ್ಯಾರ್ಥಿಗಳು ದಾಖಲಾಗಿದ್ದು, 1-5ರ ವರೆಗೆ ಶೇ. 51, 6-8ರ ವರೆಗೆ ಶೇ. 69 ಹಾಗೂ 8-10 ಶೇಕಡ 81 ವಿದ್ಯಾರ್ಥಿಗಳು ಪ್ರಸಕ್ತವಾಗಿ ಶಾಲಾ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದಾಗಿ 210 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ, ಐದು ಮಕ್ಕಳು ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಲೋಕಾಯುಕ್ತರು ಕೂಡಲೇ ಈ ಮಕ್ಕಳಿಗೆ ಸರಕಾರದ ವತಿಯಿಂದ ನೀಡಿರುವ ಪರಿಹಾರವನ್ನು ಕೂಡಲೇ ಒದಗಿಸುವಂತೆ ಸೂಚಿಸಿದರು.
ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ ಈಗಾಗಲೇ 2,467 ವಿಕಲಚೇತನ ಮಕ್ಕಳನ್ನು ಗುರುತಿಸಲಾಗಿದ್ದು ಲಸಿಕೆ ಬಂದ ಕೂಡಲೇ ಅವರಿಗೆ ಕೊಡಿಸಲಾಗುವುದು ಎಂದು ಡಿಡಿಪಿಐ ತಿಳಿಸಿದರು.
ಮುಂದಿನ ಎರಡು-ಮೂರು ತಿಂಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಲೋಕಾಯುಕ್ತರು ಈ ಸಂದರ್ಭದಲ್ಲಿ ಅವರಿಗೆ ಸೂಚಿಸಿದರು.
ಕೋವಿಡ್ ನಿರ್ವಹಣೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಸರಕಾರ 50 ಸಾವಿರ ರೂ.ಗಳ ಅನುದಾನ ಬಿಡುಗಡೆ ಮಾಡಿದೆ, ಆ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು, ಆ ಹಣ ಸದ್ಬಳಕೆ ಯಾಗಿರುವ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲನೆ ನಡೆಸಬೇಕು, ಅದರಲ್ಲಿ 10 ರೂಪಾಯಿ ಕೂಡ ದುಂದುವೆಚ್ಚವಾಗಿರಬಾರದು, ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್‍ಗಳಲ್ಲಿ ಬಿಡುಗಡೆ ಮಾಡಲಾದ ಈ ಹಣದ ಪರಿಶೀಲನೆ ನಡೆಸುವಂತೆ ಅವರು ಈ ವೇಳೆ ನಿರ್ದೇಶನ ನೀಡಿದರು.
ಅದೇ ರೀತಿಯಾಗಿ ಪ್ರತಿಯೊಂದು ತಾಲ್ಲೂಕುಗಳಲ್ಲಿಯೂ ಶೇಕಡ 100ರಷ್ಟು ಕೋವಿಡ್ ಲಸಿಕೆ ನೀಡುವ ಗುರಿಯನ್ನು ಈಡೇರಿಸಬೇಕು, ಅಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ತಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿಕೊಂಡು ಬಗೆಹರಿಸಿಕೊಳ್ಳಬೇಕು, ಮುಂದಿನ 15-20 ದಿನಗಳೊಳಗೆ ಬಾಕಿ ಉಳಿದ ಶೇ.10 ಮೊದಲ ಡೋಸ್ ಲಸಿಕೆಯನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸುವ ಮೂಲಕ ಶೇ.100ರ ಗುರಿ ತಲುಪಬೇಕು, ಗ್ರಾಮಗಳಲ್ಲಿ ಲಸಿಕೆ ಪಡೆಯದವರನ್ನು ಪತ್ತೆ ಹಚ್ಚಬೇಕು, ಅವರ ಬಳಿ ತೆರಳಿ, ಮುಖತಃ ಅವರಿಗೆ ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಿ, ಲಸಿಕೆ ಪಡೆಯಲು ಪ್ರೇರೇಪಿಸಬೇಕು ಹಾಗೂ ಲಸಿಕೆ ಪಡೆಯಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಸಕಾರತ್ಮಕವಾಗಿ ಕೈಗೊಳ್ಳಬೇಕು, ಅಧಿಕಾರಿಗಳು ಮನಸ್ಸು ಮಾಡಿದರೆ ಒಂದು ವಾರದೊಳಗೆ ಕಾರ್ಯವನ್ನು ಪೂರ್ಣಗೊಳಿಸಬಹುದಾಗಿದೆ ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿ ಸಾರ್ವಜನಿಕರ ಕೆಲಸಕ್ಕೆ ವಿಪರೀತ ಅಡಚಣೆಯುಂಟು ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಈ ರೀತಿ ತೊಂದರೆಯುಂಟು ಮಾಡಿದ್ದಲ್ಲಿ ಸಂಬಂಧಿಸಿದವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಅವರು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಸ್ಯೆಗಳನ್ನುಂಟು ಮಾಡಬಾರದು, ಒಂದು ವೇಳೆ ಮಾಡಿದ್ದಲ್ಲೀ, ಸಮಸ್ಯೆ ಮಾಡಿದವರ ಶಿಕ್ಷೆಗೆ ಶಿಫಾರಸು ಮಾಡುವುದು ತಮ್ಮ ಕೆಲಸವಾಗಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ ವೇದಿಕೆಯಲ್ಲಿದ್ದರು.
ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯಲ್ಲಿದ್ದರು.
ಶಾಲೆ, ಲಸಿಕಾ ಕೇಂದ್ರಕ್ಕೆ ಭೇಟಿ:
ಇದಕ್ಕೂ ಮುನ್ನ ಕರ್ನಾಟಕ ಲೋಕಾಯುಕ್ತರಾದ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಅವರು ನಗರದ ಗಾಂಧಿ ನಗರದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳು ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಅವರು ನಗರದ ವೆನ್‍ಲಾಕ್ ಆಸ್ಪತ್ರೆಯಲ್ಲಿರುವ ಆಯುಷ್ ಘಟಕದಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇ ಸ್ವಾಮಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿದ್ದರು.

