ಉಜಿರೆ: ಕೇವಲ 15 ದಿನಗಳಲ್ಲಿ ಒಂದೇ ಕುಟುಂಬದ ಮೂರು ಜನ ಕೋವಿಡ್ 19 ಗೆ ಬಲಿಯಾದ ಘಟನೆ ಉಜಿರೆ ಗ್ರಾಮದ ಗಾಂಧಿನಗರ ಎಂಬಲ್ಲಿ ನಡೆದಿದೆ.


ಉಜಿರೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಶ್ರೀನಿವಾಸ್ ಉಜಿರೆ ಅವರ ತಂದೆ ಪುರಲ್ಲ (92) ಎಂಬವರು ಕೋವಿಡ್ 19 ಸೋಂಕಿಗೆ ಮೇ 13 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 6 ಗಂಡು , 1 ಹೆಣ್ಣು ಮಕ್ಕಳಿದ್ದಾರೆ. ಇದಾದ ನಂತರ ಮೃತರ ಮಗಳು ಅಪ್ಪಿ (45) ಎಂಬವರು ಕೋವಿಡ್ 19 ಸೋಂಕಿಗೆ ಮಂಗಳೂರಿನಲ್ಲಿ ಮೇ 23 ರಂದು ನಿಧನರಾದರು. ಇದಾದ ಬಳಿಕ ಮೃತ ಅಪ್ಪಿರವರ ಪತಿ ಗುರುವ (52) ಮೇ 27 ರಂದು ಸೋಂಕಿಗೆ ಬಲಿಯಾಗಿದ್ದಾರೆ. ದಂಪತಿಗಳಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ.
ಕೇವಲ ಹದಿನೈದು ದಿನಗಳಲ್ಲಿ ಒಂದೇ ಕುಟುಂಬದ ಮೂರು ಸದಸ್ಯರು ಕೋವಿಡ್ 19 ಗೆ ಬಲಿಯಾಗುವ ಮೂಲಕ ಇಡೀ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಉಜಿರೆ ಗ್ರಾಮದ ಗಾಂಧಿನಗರ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಮನೆಗಳಿದ್ದು , ಒಂದೇ ಕುಟುಂಬದ ಮೂರು ಸದಸ್ಯರ ಸಾವು ಇಡೀ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಆಡಳಿತ ಈ ಪ್ರದೇಶದ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗಾಂಧಿನಗರ ಪ್ರದೇಶದಲ್ಲಿ ಒಟ್ಟು 30 ಕ್ಕೂ ಹೆಚ್ಚು ಕೋವಿಡ್ 19 ಪಾಸಿಟಿವ್ ಪ್ರಕರಣ ದಾಖಲಾಗಿದ್ದು , ಜನತೆಯ ನಿದ್ದೆಗೆಡಿಸಿದೆ.












