ಬಂಟ್ವಾಳ: ಧಾರ್ಮಿಕ ಭಾವನೆಗಳ ಮೂಲಕ ಜನತೆಯನ್ನು ವಿಭಜಿಸಿ ಮತ ಕೇಳುವ ಬಿಜೆಪಿಯನ್ನು ದೂರವಿರಿಸಿ ಸರ್ವ ಧರ್ಮ ಸೌಹಾರ್ದತೆಯ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಬಂಟ್ವಾಳ ತಾಲೂಕು ರಾಯಿ ಗ್ರಾ.ಪಂ.ವ್ಯಾಪ್ತಿಯ ಅಣ್ಣಳಿಕೆಯಲ್ಲಿ ಎ.೮ರಂದು ರಾತ್ರಿ ನಡೆದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರು ಮೋಸದ ಮಾತುಗಳಿಂದ ಜನತೆಯನ್ನು ಮರುಳುಗೊಳಿಸಿದ್ದಾರೆ. ಜನ್‌ಧನ್ ಮೂಲಕ ಪ್ರತಿಯೊಬ್ಬರ ಖಾತೆಗೆ ಆರ್ಥಿಕ ಸಹಾಯ ನೀಡುವ ಮಾತು ಸುಳ್ಳಾಗಿದೆ. ೩೦ ರೂ.ಗಳಿಗೆ ಪೆಟ್ರೋಲ್, ಡೀಸೆಲ್ ನೀಡುತ್ತೇನೆಂದ ಮೋದಿ ಜನತೆಯನ್ನು ವಂಚಿಸಿದ್ದಾರೆ. ಕಾಳಧನ ವಾಪಸು ತರುತ್ತೇವೆಂದು ಹೇಳಿದವರು ಬಂಡವಾಳ ಶಾಹಿಗಳಿಗೆ ಮಣೆ ಹಾಕಿದ್ದಾರೆ ಎಂದರು.
ಈ ಹಿಂದೆ ದ.ಕ.ಜಿಲ್ಲೆಯ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರು ಜಿಲ್ಲೆಯ ಅಭಿವೃದ್ಧಿಗೆ ಅನೇಕ ರೀತಿಯ ಕೊಡುಗೆಯನ್ನು ನೀಡಿದ್ದಾರೆ. ಆದರೆ ಕಳೆದ ೨೮ ವರ್ಷಗಳಿಂದ ಬಿಜೆಪಿ ಸದಸ್ಯರ ಸಾ‘ನೆ ಶೂನ್ಯವಾಗಿದೆ. ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಅಭಿವೃದ್ಧಿಗೆ ಅವಕಾಶ ನೀಡಿ ಎಂದು ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಬಿ. ಪದ್ಮಶೇಖರ ಜೈನ್, ಪದ್ಮರಾಜ ಬಲ್ಲಾಳ್ ಮಾವಂತೂರು, ಜನಾರ್ದನ ಚಂಡ್ತಿಮಾರ್, ರಾಮಚಂದ್ರ ಶೆಟ್ಟಿಗಾರ್, ರಾಯಿ ವಲಯಾಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ರಾಯಿ, ಅರಳ ವಲಯಾಧ್ಯಕ್ಷ ಅಶ್ರಫ್ ಕುಟ್ಟಿಕಳ, ಗ್ರಾ.ಪಂ. ಸದಸ್ಯರಾದ ಜಗದೀಶ್ ಕೊಲ, ಸುನಂದಾ ಮತ್ತಿತರರು ಉಪಸ್ಥಿತರಿದ್ದರು.
