ಬಂಟ್ವಾಳ, ಆ. ೧೨: ಬಂಟ್ವಾಳದ ಹಾನಿಯ ಕುರಿತಂತೆ ಸಂಪೂರ್ಣ ದಾಖಲೆಗಳನ್ನೊಳಗೊಂಡು ೩೦ ಕೋ.ರೂ.ಪರಿಹಾರ ಮೊತ್ತದ ಬೇಡಿಕೆಯನ್ನು ಸಿಎಂಗೆ ಸಲ್ಲಿಸಲಾಗಿದ್ದು, ಜತೆಗೆ ನೆರೆಯಿಂದ ಹಾನಿಯಾದ ಸಣ್ಣಪುಟ್ಟ ಅಂಗಡಿಯವರಿಗೂ ಪರಿಹಾರ ನೀಡಲು ಮನವಿಯಲ್ಲಿ ತಿಳಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ತಿಳಿಸಿದರು.
ಬಂಟ್ವಾಳ ಬಪಾಸ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ನೀಡಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ಮನೆಯಲ್ಲಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾನಿಯಾಗಿದ್ದರೆ ಅದಕ್ಕೂ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ಬಳಿ ಸರ್ವೆ ಮಾಡಲು ತಿಳಿಸಿದ್ದಾರೆ. ಈ ಮೂಲಕ ದೊಡ್ಡ ಮೊತ್ತದ ಪರಿಹಾರವನ್ನು ಸಿಎಂ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಅವರಿಗೆ ವಂದನೆಯನ್ನು ತಿಳಿಸುತ್ತಾ, ಬಂಟ್ವಾಳ ನೆರೆ ಸಂತ್ರಸ್ಥರ ಪರಿಹಾರಕ್ಕೆ ಇಲ್ಲಿನ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದು, ಮುಂದೆಯೂ ಅವರು ಇದೇ ರೀತಿ ಕೆಲಸ ನಿರ್ವಹಿಸಬೇಕಿದೆ ಎಂದರು.
