ಬಂಟ್ವಾಳ: ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಲ್ಲಿರುವ ಪ್ರಸನ್ನ ಕಾಂಪ್ಲೆಕ್ಸ್ ನಲ್ಲಿರುವ ರೀಕೃಷಿಯೇಷನ್ ಕ್ಲಬ್ ಗೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಶನಿವಾರ ಸಂಜೆ ದಾಳಿ ನಡೆಸಿ ಅನಧಿಕೃತವಾಗಿ ಹಣವನ್ನು ಪಣ ವಾಗಿಟ್ಟು ಜೂಜಾಟದಲ್ಲಿ ನಿರತರಾಗಿದ್ದ 70 ಮಂದಿಯನ್ನು ವಶಕ್ಕೆ ಪಡೆದು, ನಗದು ಸಹಿತ ಲಕ್ಷಾಂತರ ರೂ.ಮೌಲ್ಯದ ಸೊತ್ತನ್ನು ಮುಟ್ಟುಗೋಲು ಹಾಕಿದ್ದಾರೆ.


ಖಚಿತ ಮಾಹಿತಿಯನ್ನಾಧರಿಸಿ ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶರ ಅನುಮತಿಯೊಂದಿಗೆ ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್, ನಗರ ಠಾಣೆಯೆ ಎಸ್. ಐ.ಗಳಾದ ಚಂದ್ರಶೇಖರ್,ಸುಧಾಕರ ತೋನ್ಸೆ ಹಾಗೂ ಸಂಚಾರಿಠಾಣೆಯ ಎಸ್ .ಐ. ಮಂಜುನಾಥ್ ಮತ್ತು ಸಿಬಂದಿಗಳು ಮಿಂಚಿನ ದಾಳಿ ಕಾರ್ಯಾಚರಣೆ ನಡೆಸಿ ತಪಾಸಣೆ ನಡೆಸಿದಾಗ ಕ್ಲಬ್ ಗೆ ಯಾವುದೇ ಪರವಾನಿಗೆ ಇಲ್ಲದಿರುವುದು ಮತ್ತು ಉಚ್ಚ ನ್ಯಾಯಾಲಯದ ನಿಯಮವನ್ನು ಉಲ್ಲಂಘಿಸಿ ಜೂಜಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ಕ್ಲಬ್ ನ ಮ್ಯಾನೇಜರ್ ಸಾಯಿ ಕಿರಣ್( 37) ಮಂಜೇಶ್ವರ ಈತನ ಸಹಿತ ಜೂಜಾಟದಲ್ಲಿ ನಿರತರಾಗಿದ್ದ 70 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಹಾಗೆಯೇ ಜೂಜಾಟಕ್ಕೆ ಪಣವಾಗಿಟ್ಟಿದ್ದ 72,100 ರೂ. ಮತ್ತು 1 ಲಕ್ಷ ರೂ ಮೌಲ್ಯದ ವಿವಿಧ ಕಂಪನಿಯ 51 ಮೊಬೈಲುಗಳು , ಒಂದು ಪೆನ್ನು, 52 ಇಸ್ಪೀಟು ಎಲೆಗಳು, 2 ಡಿವಿಆರ್ ಗಳು, ಒಂದು ರೌಂಡ್ ಟೇಬಲ್, 7 ಕುರ್ಚಿಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ಮುಂದಿನ ತನಿಖೆ ನಡೆಯುತ್ತಿದೆ.