ಬಂಟ್ವಾಳ: ಸಿ.ಐ.ಟಿ.ಯು ಬಂಟ್ವಾಳ ತಾಲೂಕು ಸಮ್ಮೇಳನವು ಇಂದು ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ಹಿರಿಯ ಕಾರ್ಮಿಕ ಮುಖಂಡರಾದ ಸಂಜೀವ ಬಂಗೇರರ ಅದ್ಯಕ್ಷತೆಯಲ್ಲಿ ನಡೆಯಿತು. ಸಮ್ಮೇಳನವನ್ನು ಉದ್ಘಾಟಿಸಿ ಸಿ.ಐ.ಟಿ.ಯು ಜಿಲ್ಲಾ ಅದ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಇಂದು ನಮ್ಮನ್ನಾಳುವ ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳು ಕಾರ್ಮಿಕ ವಿರೋಧಿಯಾಗಿದ್ದು ಕಾರ್ಮಿಕರು ಹೋರಾಟಗಳಿಂದ ಪಡೆದ ಹಕ್ಕುಗಳನ್ನು ಕಸಿಯುವ ಮೂಲಕ ಸರಕಾರವು ಮಾಲಕರ ಪರವಾಗಿ ಕಾನೂನುಗಳನ್ನು ಜಾರಿಗೊಳಿಸುತ್ತಿದ್ದು ಇದರಿಂದಾಗಿ ಇಂದು ಕಾರ್ಮಿಕ ವರ್ಗ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಕಾರ್ಮಿಕರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಚಳುವಳಿಯನ್ನು ಬಲಿಷ್ಟಗೊಳಿಸಬೇಕೆಂದು ಕರೆ ನೀಡಿದರು.

ಸಮ್ಮೇಳನದ ಸಮಾರೋಪದಲ್ಲಿ ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಕಾರ್ಮಿಕರು ಇಂದು ಬಹಳ ಸಂದಿಗ್ದ ಪರಿಸ್ಥಿತಿಯಲ್ಲಿ ಇದ್ದು ಕೇಂದ್ರ ಸರಕಾರವು ಕಾರ್ಮಿಕರ ಪರವಾಗಿ ಇರುವ ಕಾನೂನುಗಳನ್ನು ತಿದ್ದುಪಡಿಗೊಳಿಸಿ ಅದನ್ನು ಕಾರ್ಮಿಕ ಸಂಹಿತೆಯಾಗಿ ಮಾರ್ಪಡಿಸಲು ಪ್ರಯತ್ನಿಸುತ್ತಿದ್ದು, ಹಾಗೂ ಈಗಾಗಲೇ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರದ್ದು ಮಾಡಲು ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದ್ದು ,ಮುಂದೆ ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ಗಳನ್ನು ಕಾರ್ಮಿಕರಿಂದ ಕಸಿದುಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದ್ದು ಕಾರ್ಮಿಕರು ಈ ಬಗ್ಗೆ ಜಾಗೃತಗೊಂಡು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಚಳುವಳಿಯನ್ನು ಮುನ್ನಡೆಸಬೇಕೆಂದು ಕರೆ ನೀಡಿದರು. ಸಮ್ಮೇಳನದಲ್ಲಿ ಟೂರಿಸ್ಟ್ ಕಾರು ಚಾಲಕರ ಸಂಘದ ಅದ್ಯಕ್ಷರಾದ ಪ್ರಭಾಕರ ದೈವಗುಡ್ಡೆ ಶುಭಕೋರಿ ಮಾತನಾಡಿದರು, ಸಾಮಾಜಿಕ ಕಾರ್ಯಕರ್ತರಾದ ರಾಜ ಚೆಂಡ್ತಿಮಾರ್, ಹಿರಿಯ ಕಾರ್ಮಿಕ ಮುಖಂಡರಾದ ಬಿ.ವಾಸುಗಟ್ಟಿ, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ವಿನಯ ನಡುಮುಗೇರು, ವೇದಿಕೆಯಲ್ಲಿದ್ದರು. ಸಿ.ಐ.ಟಿ.ಯು ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉದಯ ಕುಮಾರ್ ಬಂಟ್ವಾಳ ಕೊನೆಯಲ್ಲಿ ವಂದಿಸಿದರು. ಇದೇ ಬರುವ ದಿನಾಂಕ 18 ಮತ್ತು 19 ರಂದು ಸಿ.ಐ.ಟಿ.ಯು ಜಿಲ್ಲಾ ಸಮ್ಮೇಳನ ಮಂಗಳೂರಿನಲ್ಲಿ ಜರುಗಲಿದ್ದು ಇದಕ್ಕೆ ಬಂಟ್ವಾಳ ತಾಲೂಕಿನಿಂದ 21 ಜನ ಪ್ರತಿನಿದಿಗಳನ್ನು ಆಯ್ಕೆ ಮಾಡಲಾಯಿತು ಹಾಗೂ ಸಮ್ಮೇಳನದಲ್ಲಿ ನೂತನ 15 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.