ಬಂಟ್ವಾಳ : ಕೋಮು ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಬಿ.ಸಿ.ರೋಡಿನಲ್ಲಿ ಕೊನೆಗೂ ಸೀಸಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಇನ್ನು ಮುಂದೆ ವಾಹನ ಸವಾರರು ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದರೆ, ತಮ್ಮ ವಾಹನ ನಂಬರ್ ನ ಆಧಾರದಲ್ಲಿ ಮನೆಗೆ ನೊಟೀಸ್ ತಲುಪಲಿದ್ದು, ಅಪಾರ ಪ್ರಮಾಣದ ದಂಡವನ್ನು ತೆರಬೇಕಾದೀತು. ಈ ಹಿಂದೆ ಗಲಭೆ ಸಂದರ್ಭ ಮಾತ್ರ ತಾಲೂಕಿನ ಹೃದಯಭಾಗವಾದ ಬಿ. ಸಿ. ರೋಡು ಸಹಿತ ಕೆಲವೊಂದು ಆಯಕಟ್ಟಿನ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಸೀಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ಇರಿಸಲಾಗಿತ್ತು. ಸೀಸಿ ಕ್ಯಾಮರಾದಿಂದ ವಿವಿಧ ಅಪರಾಧ ಚಟುವಟಿಕೆಯನ್ನು ಪತ್ತೆಹಚ್ಚುವುದು ಸೇರಿದಂತೆ ಹಲವಾರು ಸಂದರ್ಭದಲ್ಲಿ ಪೊಲೀಸರ ತನಿಖೆಗೂ ಸಹಕಾರವಾಗುತಿತ್ತು. ಆದರೆ ಕಳೆದ ಬಾರಿ ಪೊಲೀಸ್ ಇಲಾಖೆ ಬಿ. ಸಿ. ರೋಡಿನಲ್ಲಿ ಅಳವಡಿಸಿದ್ದ ಸೀಸಿ ಕ್ಯಾಮೆರಾ ಕಾರ್ಯನಿರ್ವಹಿಸದೆ ಕೆಟ್ಟು ಹೋಗಿದೆ. ಬಿ. ಸಿ. ರೋಡು ಸರ್ವಿಸ್ ರಸ್ತೆಯಿಂದ ಪೊಲೀಸ್ ಠಾಣೆಯ ರಸ್ತೆಗೆ ತಿರುವು ಪಡೆಯುವ ಸ್ಥಳ ಹಾಗೂ ವಿವಿಧ ದಿಕ್ಕುಗಳ ಮೇಲೆ ನಿಗಾ ಇಡಲು ಮೂರ್ನಾಲ್ಕು ಸೀಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ ಅದು ಸಮಪರ್ಕವಾಗಿ ಕಾರ್ಯನಿರ್ವಹಿಸದೆ ಕಂಬಗಳ ಹಾಗೂ ತಂತಿಗಳ ಮಧ್ಯೆ ಸಿಲುಕಿದೆ. ಇದೀಗ ಮೋಟಾರು ವಾಹನ ಕಾಯ್ದೆ ಕಠಿಣವಾಗಿ ಜಾರಿಯಾಗಿರುವ ಹಿನ್ನಲೆಯಲ್ಲಿ ಬಿ. ಸಿ. ರೋಡು ಸಹಿತ ಕೆಲವೆಡೆ ಸೀಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳುವುದು ಸಹಿತ ವಿವಿಧ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲೂ ಅಲ್ಲಲ್ಲಿ ಸೀಸಿಕ್ಯಾಮರ ಅಳವಡಿಸಲಾಗಿದೆ. ಬಿ ಸಿ ರೋಡು ಮುಖ್ಯ ವೃತ್ತ, ಬಸ್ ನಿಲ್ದಾಣ ಬಳಿ, ಕೈಕಂಬ ಮೊದಲಾದಡೆ ಸೀಸಿ ಕ್ಯಾಮೆರಾ ಸಹಿತ ವಿದ್ಯುದ್ದೀಪವನ್ನು ಹಾಕಲಾಗಿದೆ.
