ಬಂಟ್ವಾಳ: ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಶಿಕ್ಷಕರ ಸಮೂಹದಿಂದ ಆಗಬೇಕು ಎಂದು ಕರ್ನಾಟಕ ಪತ್ರಕರ್ತರ ಸಂಘದ ದ.ಕ. ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಹೇಳಿದರು.
ಕರ್ನಾಟಕ ಪತ್ರಕರ್ತರ ಸಂಘದ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ.ರೋಡಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಇಂದು ಎಲ್ಲ ರೀತಿಯ ಚಿಕಿತ್ಸೆಗಳಿದ್ದು, ಸೂಕ್ತ ವ್ಯವಸ್ಥೆಗಳನ್ನು ಸರಕಾರ ಕೂಡಾ ಮಾಡುತ್ತಿದೆ. ಇದನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಬದ್ದರಾಗಬೇಕು ಎಂದರು.



*ಮಕ್ಕಳನ್ನು ಕ್ಯಾನ್ಸರಿಂದ ರಕ್ಷಿಸೋಣ*:
ಇವತ್ತು ಮಕ್ಕಳಿಗೆ ಸರಿಯಾದ ಪೌಷ್ಟಿಕಾಂಶದ ಆಹಾರ ಸಿಗುತ್ತಿಲ್ಲ. ಅವರ ಆಹಾರ ಪದ್ದತಿ ಹಾಗೂ ಕ್ರಮಗಳ ಬಗ್ಗೆ ಪೋಷಕರು ತೀವ್ರ ನಿಗಾ ವಹಿಸಿ ಕ್ಯಾನ್ಸರ್ ರೋಗದಿಂದ ರಕ್ಷಿಸಬೇಕಿದೆ ಎಂದು ಎನ್.ಪಿ.ಸಿ.ಡಿ.ಸಿ.ಎಸ್. ಯೋಜನೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಡಾ. ಸುಷ್ಮಾ ಅಡಪ ತಿಳಿಸಿದರು.
ಕ್ಯಾನ್ಸರ್ ರೋಗದ ಲಕ್ಷಣಗಳು, ರೋಗವನ್ನು ಪತ್ತೆ ಹಚ್ಚುವ ವಿಧಾನ ಹಾಗೂ ತಡೆಗಟ್ಟುವ ಮುಂಜಾಗೃತಾ ಕ್ರಮಗಳನ್ನು ವಿವರಿಸಿದರು, ಶಿಕ್ಷಕರೊಂದಿಗೆ ಮುಕ್ತ ಸಂವಾದ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ವೈದ್ಯಕೀಯ ಸೌಲಭ್ಯಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಅವರು ಮಾತನಾಡಿದರು.
ಪತ್ರಕರ್ತರಾದ ಯು. ಮುಸ್ತಫಾ, ಸತೀಶ್ ಕಾರ್ತಿಕ್, ಲತೀಫ್ ನೇರಳಕಟ್ಟೆ. ರಹಿಮಾನ್ ತಲಪಾಡಿ ಮೊದಲಾದವರು ಭಾಗಹಿಸಿದ್ದರು.
ಕರ್ನಾಟಕ ಪತ್ರಕರ್ತರ ಸಂಘದ ಬಂಟ್ವಾಳ ತಾಲೂಕು ಸಮಿತಿಯ ಸದಸ್ಯ ಜಯಾನಂದ ಪೆರಾಜೆ ಸ್ವಾಗತಿಸಿ, ಅಳಿಕೆ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲ ರಘು ಟಿ.ವೈ. ವಂದಿಸಿದರು. ಸಂಘದ ಅಧ್ಯಕ್ಷ ಫಾರೂಕ್ ಬಂಟ್ವಾಳ ಪ್ರಸ್ತಾವನೆ ಗೈದರು. ಉಪಾಧ್ಯಕ್ಷ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.