ದೆಹಲಿ: ದಾವುದ್ ಇಬ್ರಾಹಿಂ ಸಹಚರ ಹಾಗೂ ಭೂಗತ ಪಾತಕಿ ಛೋಟಾ ರಾಜನ್ ದೆಹಲಿಯ ಏಮ್ಸ್ ಆಸ್ಪತ್ರೆಯ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂಬ ಸುದ್ದಿಯನ್ನು ಆಸ್ಪತ್ರೆಯ ಅಧಿಕಾರಿಗಳು ನಿರಾಕರಿಸಿದ್ದಾರೆ.


ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಛೋಟಾ ರಾಜನ್ ಗೆ ಕೊರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಛೋಟಾ ರಾಜನ್ ಸಾವನ್ನಪ್ಪಿರುವುದಾಗಿ ಸಾಮಾಜಿಕ ಮಾಧ್ಯಮಗಳು ಹಾಗೂ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಆದರೆ ಮಾಧ್ಯಮಗಳ ವರದಿಯನ್ನು ನಿರಾಕರಿಸಿರುವ ಏಮ್ಸ್ ಆಸ್ಪತ್ರೆಯ ಅಧಿಕಾರಿಗಳು, 61 ವರ್ಷದ ಛೋಟಾ ರಾಜನ್ ಜೀವಂತವಾಗಿದ್ದಾರೆ. ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಭೂಗತ ಪಾತಕಿ ಛೋಟಾ ರಾಜನ್ ನನ್ನು 2015ರಲ್ಲಿ ಇಂಡೋನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ಬಂಧಿಸಿದ್ದರು. ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಭಯೋತ್ಪಾದನೆ ತಡೆ ಕಾಯ್ದೆ ಹಾಗೂ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಸಹಿತ ಕೊಲೆ ಸೇರಿ ಆತನ ವಿರುದ್ಧ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.












