ವಿಟ್ಲ: ಪುಣಚ ಗ್ರಾಮದ ಮೂಡಂಬೈಲು ಪರಿಸರದಲ್ಲಿ ಸ್ಥಾಪನೆಗೊಂಡಿರುವ ಕ್ರಷರ್ ಘಟಕಕ್ಕೆ ಬೇರೆಬೇರೆ ಇಲಾಖೆಗಳ ಪರವಾನಿಗೆ ಇದ್ದರೂ ಸಹ ಅದಕ್ಕೆ ಕಾರ್ಯಾಚರಿಸಲು ಸ್ಥಳೀಯ ಪಂಚಾಯಿತಿ ಅಡ್ಡಿ ಪಡಿಸುತ್ತಿರುವುದೇಕೆ.. ವಿದ್ಯುತ್ ಸಂಪರ್ಕ ಹೋದ ತಕ್ಷಣ ಗ್ರಾಮದ ಬಿಎಸ್‌ಎನ್‌ಲ್ ಟವರ್‌ನ ಕಾರ್ಯವೂ ಸ್ಥಗಿತಗೊಳ್ಳುವುದಕ್ಕೆ ಪರಿಹಾರವೇ ಇಲ್ಲವೇ.. ಪುಣಚ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಗುರುವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಸ್ಪಷ್ಟನೆ ಕೇಳಿದರು.
ಕ್ರಷರ್ ಘಟಕಕ್ಕೆ ಪ್ರತಿಯೊಂದು ಇಲಾಖೆಗಳ ಅನುಮತಿ ಕಡ್ಡಾಯವಾಗಿದೆ. ಆದರೆ ನಿಯಮಾವಳಿಯಂತೆ ಈ ಕ್ರಷರ್‌ಗೆ ಬೇರೆ ಬೇರೆ ಇಲಾಖೆಗಳ ನಿರಾಕ್ಷೇಪಣಾ ಅನುಮತಿ ಇಲ್ಲದ ಕಾರಣ ಸದ್ಯ ಪರವಾನಿಗೆ ನೀಡಿಲ್ಲ. ಕ್ರಮಬದ್ಧ ದಾಖಲೆ ಸಲ್ಲಿಸಿದರೆ ಪಂಚಾಯಿತಿಯಿಂದಲೂ ಸಹ ಅನುಮತಿ ನೀಡಬಹುದು ಎಂದು ಪಿಡಿಒ ಸ್ಪಷ್ಟನೆ ನೀಡಿದರು.
ಬಿಎಸ್‌ಎನ್‌ಎಲ್ ಟವರ್‌ನ ಸಮಸ್ಯೆ ಗ್ರಾಮಾಂತರ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಸಂಬಂಧಿತ ಅಧಿಕಾರಿಗಳಲ್ಲಿ ಪಂಚಾಯಿತಿ ಮೂಲಕ ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಗ್ರಾಮದ ಹಿತದೃಷ್ಟಿಗೆ ಪೂರಕವಾದ ಆರೋಗ್ಯಕರ ಚರ್ಚೆಗಳು ಗ್ರಾಮ ಸಭೆಗಳಲ್ಲಿ ನಡೆದಾಗಲೇ ಅಭಿವೃದ್ಧಿ ಕಾರ್‍ಯಗಳಿಗೆ ಚುರುಕು ಮುಟ್ಟುತ್ತದೆ ಎಂದು ತಿಳಿಸಿದರು.
ತಾಲೂಕು, ಹೋಬಳಿ ಮಟ್ಟದ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ಸದಸ್ಯೆ ಕವಿತಾ ಸುಬ್ಬ ನಾಯ್ಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಿ, ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.
ಪಿಡಿಒ ಲಾವಣ್ಯ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಬಾಲಕೃಷ್ಣ ಹೆಚ್. ವಂದಿಸಿದರು. ಗುಮಾಸ್ತ ಶಿವರಾಮ ವರದಿ ವಾಚಿಸಿದರು. ಪಂಚಾಯಿತಿ ಸಿಬ್ಬಂದಿಗಳು ಸಹಕರಿಸಿದರು.

