ವಿಟ್ಲ: ಪುಣಚ ಗ್ರಾಮದ ಮಣಿಲ ಬಡೆಕನಡ್ಕ ಶ್ರೀ ರಕ್ತೇಶ್ವರಿ, ಪಂಜುರ್ಲಿ, ಗುಳಿಗ ಹಾಗೂ ಭೈರವ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ಎ.25 ಮತ್ತು 26 ರಂದು ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್‍ಯಧ್ಯಕ್ಷ ಮಣಿಲ ವಿಠಲ ಶಾಸ್ತ್ರಿ ತಿಳಿಸಿದರು.
ಅವರು ಬುಧವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್‍ಯಕ್ರಮಗಳ ವಿವರ ನೀಡಿದರು. ಹಲವಾರು ವರ್ಷಗಳ ಹಿಂದಿನಿಂದ ಆರಾಧನೆಗೊಳ್ಳುತ್ತಿದ್ದ ಸಾನ್ನಿಧ್ಯ ಇತ್ತೀಚಿನ ವರ್ಷ ಜೀರ್ಣಾವಸ್ಥೆಯಲ್ಲಿದ್ದು, ದೈವಕ್ಕೆ ಸಂಬಂಧಿಸಿದ ಈ ಭಾಗದ ದೈವಾಭಿಮಾನಿಗಳು ಒಟ್ಟು ಸೇರಿ ಎರಡು ತಿಂಗಳ ಅವಧಿಯೊಳಗೆ ಸುಮಾರು 20 ಲಕ್ಷ ವೆಚ್ಚದಲ್ಲಿ ದೈವಸ್ಥಾನ, ಕಟ್ಟೆಗಳನ್ನು ನಿರ್‍ಮಿಸಿ ಪ್ರತಿಷ್ಠಾ ಬ್ರಹ್ಮಕಲಶ, ನೇಮೋತ್ಸವ ನಡೆಸಲು ಸಿದ್ಧತೆಗೊಳಿಸಿದ್ದಾರೆ.
ಎ. 25ರಂದು ಸಂಜೆ ತಂತ್ರಿಗಳ, ವೈದಿಕ ಆಗಮನದ ಬಳಿಕ ನಾನಾ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಎ. 26 ರಂದು ಬೆಳಗ್ಗೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಬ್ರಹ್ಮಕಲಶ ಪೂಜೆ ನಡೆದ ಬಳಿಕ ಮಧ್ಯಾಹ್ನ 11.36 ರ ಕರ್ಕಾಟಕ ಲಗ್ನದಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಇತರ ವಿಧಿವಿಧಾನಗಳು ನಡೆಯಲಿದೆ. ಅನ್ನಸಂತರ್ಪಣೆಯ ಬಳಿಕ ಭಜನಾ ಸಂಕೀರ್ತನೆ, ನೃತ್ಯ ಭಜನೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆದು, ಎಣ್ಣೆ ಕೊಡುವ ಕಾರ್‍ಯಕ್ರಮ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ, ಅನ್ನ ಸಂತರ್ಪಣೆಯ ನಂತರ ಶ್ರೀ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು.














