ವಿಟ್ಲ: ಭವ ಸಾಗರದಲ್ಲಿ ಸಂಚರಿಸುವಾಗ ದಿಕ್ಕು ತಪ್ಪದ ಹಾಗೆ ಕರೆದುಕೊಂಡು ಹೋಗಲು ದೇವಾಲಯದ ಅಗತ್ಯವಿದೆ. ಗರ್ಭ ಗೃಹದೊಳಗೆ ದೇವ ಜೀವನ ಸಮ್ಮಿಲನವಿದೆ. ಆಧುನಿಕ ಶಿಕ್ಷಣ ಕ್ರಮ ಗೊಂದಲವಾಗಿದ್ದು, ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾದ ಮಾರ್ಗದರ್ಶನ ಬೇಕಾಗಿದೆ. ಈಶ ಪ್ರೀತಿಯೊಂದಿಗೆ ದೇಶ ಪ್ರೇಮ ಮೊಳಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಸದ್ಗುರು ಡಾ. ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ಪರಂಪರೆಯಿಂದ ಬಂದ ಆಚರಣೆಗಳನ್ನು ನಡೆಸಿದಾಗ ಧರ್ಮ ಜಾಗೃತಿಯಾಗಿ ಸಾನ್ನಿಧ್ಯ ವೃದ್ಧಿಯಾಗುತ್ತದೆ. ಧರ್ಮ ಜಾಗೃತಿಯ ಶಿಕ್ಷಣ ಮಕ್ಕಳಿಗೆ ಅವಶ್ಯಕತೆ ಇದೆ. ದೇವಾಲಯದ ಜೀರ್ಣೋದ್ಧಾರ ಕಾರ್‍ಯ ಊರಿನ ಜನರ ಜವಾಬ್ದಾರಿ ಎಂದು ತಿಳಿಸಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ, ಉದ್ಯಮಿ ವಸಂತ ಪೈ ಬದಿಯಡ್ಕ, ಮಾಣಿಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮೊಕ್ತೇಸರ ಗಣೇಶ್ ಕುಮಾರ್ ದೇಲಂತಬೆಟ್ಟು, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ನಾರಾಯಣ ಹೆಗ್ಡೆ ಕೋಡಿಬೈಲು, ಮುರಳೀಧರ ರೈ ಮಠಂತಬೆಟ್ಟು, ನಿವೃತ್ತ ಸೇನಾಧಿಕಾರಿ ವಿ. ಪಾರ್ಶ್ವನಾಥ ಶೆಟ್ಟಿ ತಿರುವೈಲುಗುತ್ತು, ಕಕ್ಕೆಪದವು ಪಂಚದುರ್ಗಾ ಪ್ರೌಢಶಾಲೆ ಜಗನ್ನಾಥ ಶೆಟ್ಟಿ ಕಕ್ಕೆಪದವು, ದಯಾ ಸಾಗರ ಚೌಟ ಕಳ್ಳಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಟ್ಲ ತಾಲೂಕು ಸಂಪರ್ಕ ಪ್ರಮುಖ್ ವಿನೋದ್ ಶೆಟ್ಟಿ ಅಡ್ಕಸ್ಥಳ ಭಾಗವಹಿಸಿದ್ದರು.
ಭುವನಾ, ನಿಷ್ಮಿತಾ ಪ್ರಾರ್ಥಿಸಿದರು. ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಡಿವಾಯಿ ನಾರಾಯಣ ರೈ ಸ್ವಾಗತಿಸಿದರು. ಕಾರ್‍ಯಾಧ್ಯಕ್ಷ ಎಂ. ಚಂದ್ರಹಾಸ ಕಾವ ಗುರುಪುರ ವಂದಿಸಿದರು. ಮಂಜುನಾಥ ಶೆಟ್ಟಿ ಕಲಾತ್ತಿಮಾರು, ಪಾಲಾಕ್ಷ ರೈ ಕಲಾತ್ತಿಮಾರು ಕಾರ್‍ಯಕ್ರಮ ನಿರೂಪಿಸಿದರು.

