ಬಂಟ್ವಾಳ: ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಇಲ್ಲಿ ಭವಿಷ್ಯದ ಶಿಕ್ಷಕರನ್ನು ರೂಪಿಸುವ ’ಭವಿಷ್ ಘಟಕ’ದ ಪ್ರೇರಣಾ ಶಿಬಿರವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ವಾಮನ ಪೈ ಉದ್ಘಾಟಿಸಿ ಮಾತನಾಡಿ ಅಪರಾಧಿಯನ್ನು ಕೂಡ ಒಬ್ಬ ಶಿಕ್ಷಕ ಪ್ರೀತಿಯಿಂದ ಬದಲಾಯಿಸಬಲ್ಲ. ಇಡೀ ಸಮಾಜ ನಿಂತಿರುವುದು ಶಿಕ್ಷಕರ ಪಾತ್ರದ ಮೇಲೆ. ಶಿಕ್ಷಕನಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಕ ವೃತ್ತಿ ವ್ಯವಹಾರಿಕವಾಗಿರಬಾರದು, ಲಾಭದ ಉದ್ದೇಶವನ್ನು ಹೊಂದಿರಬಾರದು. ತ್ಯಾಗದ ಮನೋಭಾವನೆಯಿಂದ ಮಾತ್ರ ಆದರ್ಶ ಶಿಕ್ಷಕನಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ವಸಂತ ಮಾಧವ ವಹಿಸಿ ಶಿಬಿರಕ್ಕೆ ಶುಭ ಹಾರೈಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣಪತಿ ಹೆಗಡೆ ಪ್ರಸ್ತಾವನೆಗೈದು, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ, ಭವಿಷ್ ಘಟಕದ ನಿರ್ದೇಶಕ ಯತಿರಾಜ್ ವಂದಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. 41 ಜನ ಶಿಕ್ಷಾರ್ಥಿಗಳು ೩ ದಿನದ ಶಿಬಿರದಲ್ಲಿ ಪ್ರಶಿಕ್ಷಣ ಪಡೆಯಲಿದ್ದಾರೆ.