ಬೆಳ್ತಂಗಡಿ: ಕೃಷಿ ಚಟುವಟಿಕೆಗಳನ್ನು ಈ ಭಾರಿಯ ಲಾಕ್‍ಡೌನಿನ ನಿಷೇದಾಜ್ಞೆಯಿಂದ ಹೊರಗಿಡಲಾಗಿದೆ. ಇದರೊಂದಿಗೆಎಪ್ರಿಲ್ 20ರ ನಂತರ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕಟ್ಟಡ, ರಸ್ತೆ, ಸೇತುವೆ ಮುಂತಾದ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಇದರೊಂದಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಮೂಲಕ ಗ್ರಾಮಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ಸದಸ್ಯರಿಗೂ ಉದ್ಯೋಗ ಸಿಗುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ ತಿಳಿಸಿದ್ದಾರೆ.
ಟಾಸ್ಕ್ ಪೋರ್ಸ್ ಸದಸ್ಯರು ಗ್ರಾಮಗಳಲ್ಲಿರುವ ಕೂಲಿ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಸೂಕ್ತ ಕೆಲಸ ದೊರಕಿಸಿ ಕೊಡಲು ತೋಟದ ಮಾಲೀಕರು ಹಾಗೂ ಕಾಮಗಾರಿಗಳ ಗುತ್ತಿಗೆದಾರರೊಂದಿಗೆ ಸಮನ್ವಯ ಸಾಧಿಸಲು ಸೂಚಿಸಲಾಗಿದೆ. ಅಂತೆಯೇ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ದೊರಕಿಸಿ, ಇದರ ಸವಲತ್ತುಗಳನ್ನು ಪಡೆದುಕೊಳ್ಳಲು ಉತ್ತೇಜನ ನೀಡಬೇಕು ಎಂದು ವಿವರಿಸಿರುವ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಈ ಎಲ್ಲ ಸಂದರ್ಭಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


