ಬೆಳ್ತಂಗಡಿ: ಪೆಟ್ರೋಲಿಯಂ ಪೈಪ್ ಲೈನ್‌ಗೆ ಕನ್ನ ಕೊರೆದು ಲಕ್ಷಾಂತರ ರೂ. ಮೌಲ್ಯದ ಇಂಧನ ಕಳವು ಮಾಡಿರುವ ಘಟನೆ ಪುದುವೆಟ್ಟಿನಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಂಪೆನಿಯವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪೆಟ್ರೋನೆಟ್ ಎಂ.ಎಚ್.ಬಿ. ಲಿ.ನ ನೆರಿಯದ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರು- ಹಾಸನ- ಬೆಂಗಳೂರು ಪೆಟ್ರೋನೆಟ್ ಪೈಪ್ ಮೂಲಕ ಪೆಟ್ರೋಲಿಯಂ ವಸ್ತುಗಳು ಸಾಗಾಟವಾಗುತ್ತಿದ್ದು, ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ಮಾ. 16ರಿಂದ 19ರ ವರೆಗೆ ಕಳ್ಳರು ಪೆಟ್ರೋಲಿಯಂ ಪೈಪ್ ಲೈನ್‌ಗೆ ಕನ್ನ ಕೊರೆದು 2.5 ಇಂಚಿನ ಎಚ್.ಡಿ.ಪಿ.ಇ. ಪೈಪ್ ಅಳವಡಿಸಿ ಅದರ ಮೂಲಕ 12 ಸಾವಿರ ಲೀ.ಗೂ ಅಧಿಕ ಇಂಧನವನ್ನು ಕಳವು ಮಾಡಿದ್ದು, ಇದರ ಅಂದಾಜು ಮೌಲ್ಯ ಸುಮಾರು 9,60,000 ರೂ. ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆಲದಿಂದ ಸುಮಾರು 3 ಅಡಿ ಆಳದಲ್ಲಿರುವ ಪೈಪ್ ಲೈನನ್ನು ಅಗೆದು ಪೈಪ್‌ಗೆ ರಂಧ್ರ ಕೊರೆದು ಕಳ್ಳತನ ನಡೆಸಲಾಗಿದೆ.