ಬೆಳ್ತಂಗಡಿ : ಮಹಿಳೆಯೊಬ್ಬರು ಕೈಗಳೇ ಇಲ್ಲದಿದ್ದರೂ ತನ್ನ ಹಕ್ಕನ್ನು ಚಲಾಯಿಸಿ ಇತರರಿಗೆ ಮಾದರಿಯಾದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮೂಲತಃ ಬೆಳ್ತಂಗಡಿಯವರಾದ ಸಬಿತಾ ಮೋನಿಶ್ ಅವರಿಗೆ ಎರಡು ಕೈಗಳಿಲ್ಲ. ತಮಗೆ ಕೈಗಳೇ ಇಲ್ಲದಿದ್ದರೂ ಕೂಡ ಮತಗಟ್ಟೆಗೆ ಧಾವಿಸಿ ಕಾಲಿನಿಂದಲೇ ವೋಟ್ ಹಾಕಿ ಮಾದರಿಯಾಗಿದ್ದಾರೆ. ಸಬಿತಾ ಬೆಳ್ತಂಗಡಿಯ ಗರ್ಡಾಡಿಯ ಬೂತ್ ನಲ್ಲಿ ಮತ ಚಲಾಯಿಸಿದ್ದು, ಅಧಿಕಾರಿಗಳು ಕಾಲಿನ ಬೆರಳಿಗೇ ಇಂಕ್ ಹಾಕಿದ್ದಾರೆ. ಸಬಿತಾ ಮೋನಿಶ್ ವಿಶೇಷ ಚೇತನರಾಗಿದ್ದರೂ ಕಾಲಿನಿಂದಲೇ ಪರೀಕ್ಷೆ ಬರೆದು ಎರಡು ಉನ್ನತ ಪದವಿ ಪಡೆದಿದ್ದಾರೆ ಎಂಬುದು ಗಮನಾರ್ಹ.
ಚುನಾವಣೆಗೆ ಮತದಾನ ಮಾಡುವಂತೆ ಚುನಾವಣಾ ಅಯೋಗ ಸೇರಿದಂತೆ ಜಿಲ್ಲಾಡಳಿತ ಮತದಾನ ಜಾಗೃತಿ ಅಭಿಯಾನ ನಡೆಸಿವೆ. ಆದರೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರೂ ಕುಂಟು ನೆಪ ಹೇಳಿ ಮತದಾನದಿಂದ ತಪ್ಪಿಸಿಕೊಳ್ಳುವವರು ಹಲವಾರು ಮಂದಿ ನಮ್ಮ ನಡುವೆ ಇದ್ದಾರೆ. ಅಷ್ಟೇ ಏಕೆ?, ತಮ್ಮ ಹಕ್ಕನ್ನು ಚಲಾಯಿಸಲು ರಜೆ ನೀಡಿದರೆ ಆ ರಜೆಯಲ್ಲಿ ಟೂರ್ ತೆರಳುವ ಜನರು ಇದ್ದಾರೆ. ಆದರೆ ಬೆಳ್ತಂಗಡಿಯ ಮಹಿಳೆಯೊಬ್ಬರು ವಿಕಲ ಚೇತನರಾಗಿದ್ದರೂ ಕೂಡ ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.