ಬಿ.ಸಿ.ರೋಡು-ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್ ಹೆದ್ದಾರಿಯ ಮಧ್ಯೆ ಡಿವೈಡರ್ ಮೇಲ್ಭಾಗದಲ್ಲಿ ಸುರಕ್ಷತೆಯ ದೃಷ್ಟಿಯಿಂದ ತಡೆಬೇಲಿ(ರೈಲಿಂಗ್ಸ್) ಅಳವಡಿಸಲಾಗಿದ್ದು, ಇದರಿಂದ ಹೆದ್ದಾರಿಯ ಕ್ರಾಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರಿಂದ ಅಪಸ್ವರಗಳು ಕೇಳಿಬರುತ್ತಿದೆ.!

ಚತುಷ್ಪಥ ಕಾಂಕ್ರೀಟ್ ಹೆದ್ದಾರಿಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಎರಡೂ ಭಾಗದ ಕಾಮಗಾರಿ ಪೂರ್ಣಗೊಂಡ ಭಾಗದಲ್ಲಿ ಯಾರೂ ಕೂಡ ಏಕಾಏಕಿ ಹೆದ್ದಾರಿ ಕ್ರಾಸ್ ಮಾಡದಂತೆ ಅಡ್ಡಲಾಗಿ ಕಬ್ಬಿಣದ ರೈಲಿಂಗ್ಸ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಡಿವೈಡರ್ ತೆರವುಗೊಂಡಿರುವ ಭಾಗದಲ್ಲಿ ಮಾತ್ರ ಹೆದ್ದಾರಿ ಕ್ರಾಸ್ ಮಾಡಲು ಅವಕಾಶವಿರುತ್ತದೆ.
ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಾಗುವ ಸಂದರ್ಭದಲ್ಲಿ ಯಾರಾದರೂ ಹೆದ್ದಾರಿ ಕ್ರಾಸ್ ಮಾಡಿದರೆ ಅಪಾಯದ ಸಾಧ್ಯತೆಯ ಹಿನ್ನೆಲೆಯಲ್ಲಿ ಇಲಾಖೆಯು ಈ ರೀತಿ ರೈಲಿಂಗ್ಸ್ ಹಾಕಿದೆ. ಮುಖ್ಯವಾಗಿ ದನಕರುಗಳು, ನಾಯಿಗಳು ಏಕಾಏಕಿ ಹೆದ್ದಾರಿ ಕ್ರಾಸ್ ಮಾಡುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ.
ಆದರೆ ಒಂದು ಸಣ್ಣ ಕೆಲಸಕ್ಕೂ ಹೆದ್ದಾರಿ ಕ್ರಾಸ್ ಮಾಡುವುದಕ್ಕೂ ಸುತ್ತುಬಳಸಿ ಸಾಗಬೇಕಾದ ಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸ್ಥಳೀಯರ ದೃಷ್ಟಿಯಿಂದ ನೋಡಿದರೆ ಈ ವಾದ ಸರಿ ಎನಿಸುತ್ತದೆ. ಈ ರೀತಿ ತಡೆಬೇಲಿ ಹಾಕುವ ಸಂದರ್ಭದಲ್ಲಿ ಕನಿಷ್ಠ ನಿರ್ದಿಷ್ಟ ಭಾಗದಲ್ಲಾದರೂ ಹೆದ್ದಾರಿ ದಾಟಲು ಅವಕಾಶ ನೀಡಬೇಕಿತ್ತು ಎಂಬ ಅಭಿಪ್ರಾಯವೂ ಕೇಳಿಬರುತ್ತದೆ.
ಈ ರೀತಿ ತಡೆಬೇಲಿ ಹಾಕಿರುವುದರಿಂದ ಹೆದ್ದಾರಿ ದಾಟುವವರು ಸುತ್ತಬಳಸಿ ಸಾಗದೆ ರೈಲಿಂಗ್ಸ್ ಮೇಲೆ ಹತ್ತಿ ಸಾಗುವ ಸಾಧ್ಯತೆ ಹೆಚ್ಚಿದು, ಇದರಿಂದ ಹೆಚ್ಚಿನ ಅಪಾಯ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ತಡೆಬೇಲಿ ಕಾಮಗಾರಿ ಮುಂದುವರಿದಿದ್ದು, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಅಪಾಯಕಾರಿ ಕಂದಕ.!
ಬಿ.ಸಿ.ರೋಡು-ಪುoಜಾಲಕಟ್ಟೆ ಕಾಮಗಾರಿ ಬಹುತೇತ ಪೂರ್ಣಗೊಂಡಿದ್ದು, ಬಹುತೇಕ ಭಾಗಗಳಲ್ಲಿ ಹೆದ್ದಾರಿ ಬದಿ ಅಪಾಯಕಾರಿ ಕಂದಕಗಳು ಸೃಷ್ಟಿಯಾಗಿದೆ. ಹೆಚ್ಚಿನ ಭಾಗಗಳಲ್ಲಿ ಹೆದ್ದಾರಿಯನ್ನು ಏರಿಕೆ ಮಾಡಲಾಗಿದ್ದು, ಕೆಲವೆಡೆ ಹೆದ್ದಾರಿ ಬದಿಗೆ ಕಲ್ಲು, ಮಣ್ಣು ತುಂಬಿಸಿ ಅಗಲ ಗೊಳಿಸಲಾಗಿದೆ. ಆದರೆ ಸದ್ಯಕ್ಕೆ ಅಲ್ಲಿ ಸುರಕ್ಷತಾ ವ್ಯವಸ್ಥೆಗಳು ಆಗದೇ ಇರುವುದರಿಂದ ವಾಹನಗಳು ವೇಗವಾಗಿ ಸಾಗಿ ಕಂದಕ್ಕೆ ಉರುಳುವ ಸಾಧ್ಯತೆ ಹೆಚ್ಚಿದೆ. ಕೆಲ ದಿನಗಳ ಹಿಂದೆ ಮಣ್ಣಿಹಳ್ಳದ ವಾಮದಪದವು ಕ್ರಾಸ್ ಬಳಿ ಇದೇ ರೀತಿ ಕಾರೊಂದು ಕಂದಕಕ್ಕೆ ಉರುಳಿದೆ.

