ಬಿ.ಸಿ ರೋಡ್: ಇಲ್ಲಿನ ಸ್ಪರ್ಶ ಕಲಾಮಂದಿರದ ವಠಾರದಲ್ಲಿ ‘ತುಡರ್ ಯಕ್ಷಮಿತ್ರೆರ್’ ಬಿ.ಸಿ ರೋಡ್ ಇವರ 7ನೇ ವರ್ಷದ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರಡೂರ್ ಇವರ ‘ಸೂರ್ಯಸಂಕ್ರಾಂತಿ’ ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಇದರ ಸಭಾಕಾರ್ಯಕ್ರಮವನ್ನು ಅತಿಥಿಗಳಾದ ಸುಭಾಶ್ಚಂದ್ರ ಜೈನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ವಹಿಸಿ, ಮಾತನಾಡಿ, ಕರಾವಳಿ ಗಂಡುಕಲೆ ಯಕ್ಷಗಾನ ಅದರದ್ದೇ ಆದ ವಿಶೇಷತೆ ಹೊಂದಿದ್ದು, ಸಂಗೀತ, ನಾಟ್ಯ, ಮಾತುಗಾರಿಕೆ ಜೊತೆಯಲ್ಲಿ ಮೇಳೈಸಿದಾಗ ನೋಡುವ ಪ್ರೇಕ್ಷಕರ ಕಣ್ಣಿಗೆ ಹಬ್ಬವಾಗುತ್ತದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆ ನಿಜವಾಗಿಯೂ ಅಭಿನಂದನೀಯ. ನಾವೆಲ್ಲರೂ ಇಂತಹ ಸಂಸ್ಥೆಗಳಿಗೆ ಪ್ರೋತ್ಸಾಹಿಸುವ ಮೂಲಕ ಯಕ್ಷಗಾನ ಕಲೆಯನ್ನು ಪ್ರದರ್ಶಿಸಲು ಸಹಕರಿಸೋಣ. ತುಡರ್ ಯಕ್ಷಮಿತ್ರೇರ್ ಇನ್ನಷ್ಟು ದಿನ ಕಲಾಸೇವೆಗೈಯಲಿ ಎಂದು ಶುಭ ಹಾರೈಸಿದರು.
ಪ್ರತಿವರ್ಷದಂತೆ ಈ ವರ್ಷವೂ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ರನ್ನು ವೇದಿಕೆಯಲ್ಲಿ ಫಲ ಪುಷ್ಪ ತಾಂಬೂಲ ನೀಡಿ, ಹಾರಹಾಕಿ, ಪೇಟ ತೊಡಿಸಿ, ಗೌರವ ಸಂಭಾವನೆ ನೀಡಿ ಗೌರವಿಸಲಾಯಿತು.
ಅತಿಥಿಗಳಾದ ಗಂಗಾಧರ ಶೇರಾ, ಸುಭಾಸಚಂದ್ರ ಜೈನ್, ಉಮೇಶ್ ರೆಂಜೋಡಿ ಸಮಯೋಚಿತವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ನಾರಾಯಣ್ ಸಿ. ಪೆರ್ನೆ ಸ್ವಾಗತಿಸಿ, ಗೌರವಾಧ್ಯಕ್ಷ ಶೇಷಪ್ಪ ಮಾಸ್ಟರ್ ಪ್ರಸ್ತಾಪಿಸಿದರು. ಕಾರ್ಯದರ್ಶಿ ನೇಸರ ವಳವೂರ್ ವಂದಿಸಿ, ಕವಿತಾ ಯಾದವ್ ನಿರೂಪಿಸಿದರು. ಪಧಾಧಿಕಾರಿಗಳಾದ ಉಮೇಶ್ ಮೂಲ್ಯ, ತಿಮ್ಮಪ್ಪ, ಸದಾನಂದ ಶೆಟ್ಟಿ, ರಮೇಶ್, ದಿವಾಕರ ದಾಸ್, ತಿಲಕರಾಜ್ ಸಹಕರಿಸಿದರು. ನಂತರ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.

