ಬಂಟ್ವಾಳ: ಬ್ಯಾರಿ ನಿಖಾಹ್ ಹೆಲ್ಪ್‌ಲೈನ್ ಇದರ ಕಾರ್ಯಸೂಚಿ ಹಾಗೂ ಮಾಹಿತಿಯನ್ನೊಳಗೊಂಡ ಕರಪತ್ರ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ ಸುಲ್ತಾನ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಸಂಜೆ ನಡೆಯಿತು. ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಬಡ ಯುವಕ-ಯುವತಿಯರ ಸುಂದರ ವೈವಾಹಿಕ ಜೀವನಕ್ಕೆ ಆಸರೆಯಾಗಿರುವ ಬ್ಯಾರಿ ನಿಖಾಹ್ ಹೆಲ್ಪ್‌ಲೈನ್‌ನ ಕಾರ್ಯ ಶ್ಲಾಘನೀಯ. ಯವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸುಮಾರು 285 ನವ ವಧುವಿಗೆ ಹಾಗೂ 56 ವಿಚ್ಛೇಧಿತ ವಧುವಿಗೆ ವೈವಾಹಿಕ ಸಂಬಂಧವನ್ನು ಕಲ್ಪಿಸಿರುವುದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಪ್ರಚಾರ ಹಾಗೂ ಆಡಂಬರಗಳಿಲ್ಲದ ತಂಡದ ಕಾರ್ಯ ಸಮಾಜದಲ್ಲಿ ಇನ್ನಷ್ಟು ಯಶಸ್ವಿಯಾಗಲಿ. ಇದಕ್ಕೆ ಪ್ರತಿಯೊಂದು ಜಮಾಅತ್ ಕೈಜೋಡಿಬೇಕಾಗಿದೆ ಎಂದರು.




ಕ್ಲೋತ್ ಬಾಕ್ಸ್ ಅಳವಡಿಕೆ, ರಂಜಾನ್ ಕಿಟ್ ವಿತರಣೆ, ರೋಗಿಗಳಿಗೆ ಆಹಾರ ಹಾಗೂ ಉಡುಪುಗಳ ವಿತರಣೆ, ವೈವಾಹಿಕ ಸಂಬಂಧ, ನೆರೆ ಸಂತ್ರಸ್ತರಿಗೆ ವಸ್ತ್ರ ವಿತರಣೆ, ವಸತಿ ಶಾಲೆಯ ಮಕ್ಕಳಿಗೆ ಇಫ್ತಾರ್ ಕೂಟ ಹೀಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಬ್ಯಾರಿ ನಿಖಾಹ್ ಹೆಲ್ಪ್ ತೊಡಗಿಕೊಂಡಿರುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.ಹನೀಫ್ ಮುಸ್ಲಿಯಾರ್ ಪರ್ಲಿಯಾ ದುಆಃ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬ್ಯಾರಿ ನಿಖಾಹ್ ಹೆಲ್ಪ್‌ಲೈನ್‌ನ ಪ್ರಧಾನ ಕಾರ್ಯದರ್ಶಿ ಮಜೀದ್ ಬಿಕರ್ನಕಟ್ಟೆ ಅಧ್ಯಕ್ಷತೆ ವಹಿಸಿ, ಸಂಘದ ಮುಂದಿನ ಯೋಜನೆಗಳನ್ನು ಹಾಗೂ ಕಾರ್ಯಸೂಚಿಯ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಮುಸ್ಲಿಂ ಸಮಾಜ ಬಂಟ್ವಾಳ ಇದರ ಅಧ್ಯಕ್ಷ ಇಬ್ನು ಅಬ್ಬಾಸ್, ಉದ್ಯಮಿ ಹೈದರ್ ಎಸ್.ಎಚ್. ಉಪಸ್ಥಿತರಿದ್ದರು. ಬ್ಯಾರಿ ನಿಖಾಹ್ ಹೆಲ್ಪ್‌ಲೈನ್ ಸದಸ್ಯ ರಹಿಮಾನ್ ಮಠ ನಿರೂಪಿಸಿದರು.