ಬಂಟ್ವಾಳ: ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಮೇಶ ನಾಯ್ಕ್ ಹೇಳಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಕಾಲೇಜು ಬಂಟ್ವಾಳ ತಾಲೂಕು ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಅಂತರ್ ಕಾಲೇಜು ಕ್ವಿಜ್ ಸ್ಪರ್ಧೆ-ಸಿದ್ಧಾಂತ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಮಾತನಾಡಿದರು.
ವಿದ್ಯಾರ್ಥಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳು ಬೆಳಕಿಗೆ ಬರಬೇಕಾದರೆ ಸಕ್ರಿಯವಾಗಿ ಪಾಲ್ಗೊವಿಕೆ ಮುಖ್ಯ. ಕೇವಲ ಪಠ್ಯವಿಚಾರಗಳನ್ನು ಮಾತ್ರ ಅಧ್ಯಯನ ಮಾಡಿದರೆ ಜೀವನ ಕೌಶಲ್ಯಗಳು ಬೆಳೆಯುವುದಿಲ್ಲ. ಪಠ್ಯ ವಿಚಾರದ ಜತೆ ಪಠ್ಯೇತರ ವಿಷಯಗಳಲ್ಲಿ ಆಸಕ್ತಿ ವಹಿಸಿ ತನ್ನನ್ನು ತಾನು ತೊಡಗಿಸಿಕೊಂಡಾಗ ಬದುಕು ಉಜ್ವಲವಾಗುತ್ತದೆ. ಜೀವನದ ಸಾಧನೆಗೆ ಬೌದ್ಧಿಕ ಮತ್ತು ಭೌತಿಕ ಅಂಶಗಳು ಪ್ರಮುಖ ಪಾತ್ರವಹಿಸುತ್ತದೆ. ಸ್ಪರ್ಧಾತ್ಮಕ ಮನೋಭಾವನೆಗಳು ವೃದ್ಧಿಸುತ್ತಾ ಹೋದಂತೆ ಸೃಜನಶೀಲತೆ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕಯುಗದಲ್ಲಿ ಕೇವಲ ಪಠ್ಯವಿಚಾರದ ಜತೆ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಂಟ್ವಾಳ ಎಸ್.ವಿ.ಎಸ್ ಕಾಲೇಜು ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ, ಜೀವನದಲ್ಲಿ ಪ್ರತಿಯೊಬ್ಬರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣಬೆಳೆಸಿಕೊಂಡಾಗ ಮಾತ್ರ ಪ್ರಗತಿ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಪ.ಪೂ ಕಾಲೇಜುಗಳ 10 ತಂಡಗಳು ಪಾಲ್ಗೊಂಡಿತು.
ಸಿದ್ಧಾಂತ್ ಕಾರ್ಯಕ್ರಮ ಸಂಯೋಜಕಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಅಖಿಲಾ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಸಂಯೋಜಕ ಮತ್ತು ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಅತಿಥಿ ಪರಿಚಯಿಸಿದರು.
ವಿದ್ಯಾರ್ಥಿ ಸಂಯೋಜಕಿ ಕೃತಿ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಕರ್ಣಾಕರ ವಂದಿಸಿ, ಪ್ರಥಮ ಬಿಕಾಂ ವಿದ್ಯಾರ್ಥಿನಿ ಮಾನಸ ಕಾರ್ಯಕ್ರಮ ನಿರೂಪಿಸಿದರು.
