ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆ ರೈಲ್ವೆ ನಿಲ್ದಾಣದ ಸಮೀಪ ಸಂಜೆ ವೇಳೆ ನಿಲ್ಲಿಸಿದ್ದ ಆಟೋರಿಕ್ಷಾ ಒಂದು ಬೆಳಗ್ಗೆ ನೋಡುವಾಗ ಕಾಣೆಯಾದ ಘಟನೆ ನಡೆದಿದೆ.

ಅಜಿಲಮೊಗರು ನಿವಾಸಿ ದೇಜಪ್ಪ ಯಾನೆ ಸತೀಶ್ ಎಂಬವರಿಗೆ ಸೇರಿದ ಆಟೊ ಇದಾಗಿದ್ದು, ಅನ್ಯಕಾರ್ಯನಿಮಿತ್ತ ಮತ್ತೊಂದು ವಾಹನದಲ್ಲಿ ತೆರಳಿದ್ದು,ಮುಂಜಾನೆ ಸುಮಾರು 3.30ರ ಸಮಯದಲ್ಲಿ ಬಂದು ನೋಡಿದಾಗ ಆಟೊ ಇಟ್ಟ ಜಾಗದಲ್ಲಿ ಕಾಣಿಸಲಿಲ್ಲ. ಹುಡುಕಾಡಿದರೂ ಇದು ಸಿಗಲಿಲ್ಲ ಎನ್ನಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಟ್ವಾಳ ನಗರ ಪೊಲೀಸರು ರಿಕ್ಷಾ ಪತ್ತೆಗಾಗಿ ಕಾರ್ಯಾಚರಣಾ ಮುಂದುವರಿಸಿದ್ದಾರೆ.
ಸಿ.ಸಿ.ಕ್ಯಾಮರಾದಲ್ಲಿ ಸೆರೆ
ಸತೀಶ್ ಅವರು ಗಣ್ಯ ವ್ಯಕ್ತಿಯೋರ್ವರ ಖಾಸಗಿ ವಾಹನದಲ್ಲಿ ಚಾಲಕನಾಗಿ ಹೋಗುವ ಸಂದರ್ಭದಲ್ಲಿ ಅಟೋರಿಕ್ಷಾವನ್ನು ಕೈಕುಂಜೆಯಲ್ಲಿ ನಿಲ್ಲಿಸಿ ಹೋಗಿದ್ದರು.
ಅವರು ಸಂಜೆ ವೇಳೆ ಸುಮಾರು 4 ಗಂಟೆಯ ವೇಳೆಗೆ ಇಲ್ಲಿಂದ ಉಪ್ಪಳದತ್ತ ಕಾರಿನಲ್ಲಿ ಹೋಗಿದ್ದು, ಮುಂಜಾನೆ ಸುಮಾರು 3.30 ರ ವೇಳೆಗೆ ವಾಪಾಸು ಬಂದಿದ್ದರು. ಆದರೆ ಆ ವೇಳೆಗೆ ರಿಕ್ಷಾ ಕಾಣೆಯಾಗಿತ್ತು.
ಆದರೆ ಅಟೋ ರಿಕ್ಷಾವನ್ನು ಕಳವು ಮಾಡಿ ಕೊಂಡುಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಂಡಸು ಮತ್ತು ಮಹಿಳೆಯೊಬ್ಬಳು ಆರಂಭದಲ್ಲಿ ರಿಕ್ಷಾವನ್ನು ಹಿಂಬದಿಗೆ ದೂಡುತ್ತಾರೆ, ಬಳಿಕ ಯಾವುದೋ ಸಾಧನ ಬಳಸಿ ರಿಕ್ಷಾವನ್ನು ಚಾಲನೆ ಮಾಡಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.ತನಿಖೆಯ ದೃಷ್ಟಿಯಿಂದ ಕ್ಯಾಮರಾದ ದೃಶ್ಯವನ್ನು ಪೋಲೀಸರು ನೀಡುತ್ತಿಲ್ಲ.
ಅಪರಿಚಿತ ವ್ಯಕ್ತಿಗಳ ಓಡಾಟ ಸ್ಥಳೀಯರ ಆರೋಪ
ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಬಳಿ, ಸ್ಮಶಾನ ಸುತ್ತಮುತ್ತಲಿನ ಪರಿಸರದಲ್ಲಿ ಹಗಲು, ರಾತ್ರಿ ಎನ್ನದೆ, ಅಪರಿಚಿತರು, ಜೋಡಿಗಳ ಸಂಚಾರ ಕಂಡುಬರುತ್ತಿದ್ದು, ಅಲ್ಲಿರುವ ಬೀದಿ ದೀಪಗಳನ್ನ ಸ್ವಿಚ್ ಗಳನ್ನೂ ಆಫ್ ಮಾಡಿ ಹೋಗುವವರೂ ಇದ್ದಾರೆ. ರೈಲ್ವೆ ನಿಲ್ದಾಣದಿಂದ ನೇತ್ರಾವತಿ ನದಿ ತೀರದವರೆಗಿನ ಜಾಗದಲ್ಲಿ ಅಪರಿಚಿತರು ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಈಗಾಗಲೇ ರೈಲ್ವೆ ಯಾತ್ರಿ ಬಳಕೆದಾರರ ಪರ ಹೋರಾಟಗಾರರೊಬ್ಬರು ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.