ಯಾಕಿದು ಹೀಗೆ…? ಸ್ವಲ್ಪವಾದರೂ ಸ್ಥಳೀಯಾಡಳಿತಕ್ಕೆ ಜವಾಬ್ದಾರಿ ಬೇಡವೆ…? ಅಥವಾ ಜನಗಳ ಕುರಿತು ಔದಾಸೀನ್ಯವೆ…? ಸ್ಥಳೀಯ ಆಡಳಿತವಾಗಲಿ ಜನ ಪ್ರತಿನಿಧಿಗಳಾಗಲಿ ದಿವ್ಯ ಮೌನಿಗಳಾದ ಹಿನ್ನೆಲೆಯೇನು…? ಕಟ್ಟುವ ತೆರಿಗೆ ಹಣಕ್ಕಾದರೂ.,….ನಾಚಿಕೆಯಾಗಬೇಕು. ಇಷ್ಟೆಲ್ಲ ಯಾಕಂದ್ರೆ ಬಂಟವಾಳದ ಬಿ.ಸಿ.ರೋಡ್ ಕೈಕಂಬ ಸಮೀಪದ ಕಾರಂತ ಕೋಡಿಯಲ್ಲಿ ಶತಮಾನದಾದಿಯಿಂದ ಮಳೆನೀರು ಹೋಗುವ ತೋಡೊಂದರಲ್ಲಿ ಚರಂಡಿ ನೀರಿನ ಕೊಳಚೆಯನ್ನು ಧಾರಾಕಾರವಾಗಿ ಬಿಡಲಾಗುತ್ತಿದೆ. ಈ ಕುರಿತು ಕಳೆದ ಮೂರು ವರ್ಷಗಳಿಂದ ಸಂಬಂಧಿತ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ಕೊಡಲಾಗಿದೆ. ಸ್ಥಳ ತನಿಖೆಯಾಗಿದೆ. ಭರವಸೆಯ ಮಹಾಪೂರವೇ ಹರಿದು ಬಂದಿದೆ. ಆದರೆ ಕೊಳಚೆ ನೀರು ನಿಂತಿಲ್ಲ ಮಾತ್ರವಲ್ಲ ಈ ಆಡಳಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಮೀಪದ ಜಾಗವೊಂದರಲ್ಲಿ ಶೇಖರಗೊಳ್ಳುವಂತೆ ಮಾಡಿದೆ. ರಾಜಾರೋಷದಿಂದ ಎಲ್ಲಾ ರೀತಿಯ ಕೊಳಕನ್ನು ಹೊತ್ತು ತರುತ್ತಾ ಗಬ್ಬು ವಾಸನೆಯನ್ನು ಪ್ರಸರಿಸುತ್ತಾ ಇಲ್ಲಿನ ಹಲವಾರು ಬಾವಿಗಳ ನೀರನ್ನು ಕಲುಷಿತಗೊಳಿಸುತ್ತಿದೆ. ಸೊಳ್ಳೆಗಳ ಆವಾಸಸ್ಥಾನವಾಗಿ ಪರಿವರ್ತಿತವಾಗುತ್ತಿದೆ. ಈ ಕುರಿತು ಲೆಕ್ಕವಿಲ್ಲದಷ್ಟು ಸಲ ಸಂಬಧಿತರಿಗೆ ಮನವಿ ಸಲ್ಲಿಸಲಾಗಿದೆ.

ಮಾನವೀಯತೆ ಅಂತ ಇದ್ದರೆ, ಪ್ರಜಾ ಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಬಂಟ್ವಾಳ ಪುರಸಭೆಯ ಅಧಿಕಾರಿ ವರ್ಗ, ಅದೇ ರೀತಿ ಚುನಾಯಿತ ಸದಸ್ಯರು ಮತ್ತು ಸಂಬಂಧಿತ ಇತರ ಯಾರೇ ಆಗಲಿ ತಕ್ಷಣವೇ ಎಚ್ಚರಗೊಂಡು ಈ ಜ್ವಲಂತ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ ಎಂದು ಆಗ್ರಹ ಮಾಡಿದ್ದಾರೆ.