ಬಂಟ್ವಾಳ: ಕಳೆದ ಗ್ರಾ.ಪಂ.ಚುನಾವಣಾ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿ ಸಹಾಯಕ ಚುನಾವಣಾಧಿಕಾರಿಯಾಗಿದ್ದ ಪಿಡಿಒ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೆ ಜೀವಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷ,ಹಾಲಿ ಸದಸ್ಯರೋರ್ವರಿಗೆ ಬಂಟ್ವಾಳ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಪ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತುಂಬೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ,ಹಾಲಿ ಸದಸ್ಯ ಪ್ರವೀಣ್ ಬಿ.ತುಂಬೆ ಅವರು ನ್ಯಾಯಾಲಯದಿಂದ ಶಿಕ್ಷೆಗೊಳಗಾದವರು.
2020 ಡಿ.11 ರಂದು ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು,ತುಂಬೆ ಗ್ರಾ.ಪಂ.ನ ವಾಡ್೯- 1 ರಲ್ಲಿ ಅನುಸೂಚಿತ ಮಹಿಳಾ ಮೀಸಲಾತಿ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಯೋರ್ವರು ನಾಮಪತ್ರ ಸಲ್ಲಿಸಿದ್ದರು.
ಮಧ್ಯಾಹ್ನ 3 ಗಂಟೆಯ ವೇಳೆಗೆ ಆರೋಪಿ ಪ್ರವೀಣ್ ತುಂಬೆ ಗ್ರಾ.ಪಂ.ಕಚೇರಿಗಾಗಮಿಸಿ ಅನುಸೂಚಿತ ಮಹಿಳಾ ಮೀಸಲಾತಿ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ನೀವೇ ಕಾರಣರಾಗಿದ್ದಿರಿ ಎಂದು ಏರುಧ್ವನಿಯಲ್ಲಿ ಮೇಜು ಬಡಿದು ಚುನಾವಣೆಗೆ ಸಂಬಂಧಿಸಿದ ಕಾಗದಪತ್ರವನ್ನು ಬಿಸಾಕಿ ಚುನಾವಣಾ ಹಾಗೂ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದಲ್ಲದೆ ಪಿಡಿಒ ಮಹಿಳೆಯೆಂದು ಪರಿಗಣಿಸದೆ ಅವಹೇಳನಕಾರಿಯಾಗಿ ನಿಂದಿಸಿ ಜೀವಬೆದರಿಕೆ ಒಡ್ಡಿದ್ದರೆಂದು ಪಿಡಿಒ ಚಂದ್ರಾವತಿಯವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಘಟನೆಯ ಬಗ್ಗೆ ಗ್ರಾಮಾಂತರ ಠಾಣೆಯ ಎಸ್ ಐ ಆಗಿದ್ದ ಪ್ರಸನ್ನ ಎಂ.ಎಸ್.ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ವಾದ- ವಿವಾದ ಆಲಿಸಿದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಪ್ ಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ವಿವಿಧ ಭಾ.ದ.ಸಂ.ಗೊಳಂಡಂತೆ ಒಟ್ಟು ಸಾದಾ ಶಿಕ್ಷೆ ಅನುಭವಿಸುವಂತೆ ಹಾಗೂ ದಂಡವನ್ನು ವಿಧಿಸಿ ತೀರ್ಪುನೀಡಿದ್ದಾರೆ.
ಸರಕಾರದ ಪರವಾಗಿ ಎಪಿಪಿ ಸರಸ್ವತಿಯವರು ವಾದಿಸಿದ್ದರು.