ಬಂಟ್ವಾಳ: ಕೊರೋನ ವೈರಸ್ ಜಾಗತಿಕ ಆರ್ಥಿಕ ವ್ಯವಸ್ಥೆ, ಸಾಮಾಜಿಕ, ರಾಜಕೀಯದ ಮೇಲೆ ಗಂಭೀರ ಸ್ವರೂಪದ ದುಷ್ಪರಿಣಾಮ ಬೀರಿದ್ದು, ಇದೀಗ ಮುಸ್ಲಿಮರ ಶುಕ್ರವಾರದ ಜುಮಾ ನಮಾಝ್ ಮೇಲೆಯೂ ಎಫೆಕ್ಟ್ ಉಂಟಾಗಿದ್ದು, ನಮಾಝ್ ಗೆ ಮೊದಲಿನ ಖುತ್ಬಾ ಪಾರಾಯಣ ಹಾಗೂ ಆ ಬಳಿಕದ ಸಾಮೂಹಿಕ ಪ್ರಾರ್ಥನೆಯನ್ನು ಚುಟುಕಾಗಿ ಮುಗಿಸಲಾಗಿದೆ.

ಕರ್ನಾಟಕ ಕರಾವಳಿಯಲ್ಲಿ ಸಾಮಾನ್ಯವಾಗಿ ಶುಕ್ರವಾರದ ಜುಮಾ ನಮಾಝ್ ಮಧ್ಯಾಹ್ನ 1:15ಕ್ಕೆ ಆರಂಭಗೊಂಡು 5ರಿಂದ 7 ನಿಮಿಷಗಳಲ್ಲಿ ಮುಗಿಯಲಿದೆ. ಆ ಬಳಿಕ ಸುಮಾರು 15ರಿಂದ 20 ನಿಮಿಷಗಳ ಕಾಲ 1ನೇ ಮತ್ತು 2ನೇ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಅಲ್ಲದೆ ನಮಾಝ್ ಗೂ ಮೊದಲು 15 ನಿಮಿಷಗಳ ಕಾಲ ಅಂದರೆ ಮಧ್ಯಾಹ್ನ 1ರಿಂದ 1:15ರ ವರೆಗೆ ಖುತ್ಬಾ ಪಾರಾಯಣ ನಡೆಯುತ್ತದೆ. ಬಹುತೇಕ ಮಸೀದಿಗಳಲ್ಲಿ 1ನೇ ಮತ್ತು 2ನೇ ಸಾಮೂಹಿಕ ಪ್ರಾರ್ಥನೆ ಮುಗಿದ ಬಳಿಕ ಅರ್ಧ ತಾಸಿನಷ್ಟು ಉಪದೇಶ ಭಾಷಣ ನಡೆಯುತ್ತದೆ.
ಆದರೆ ಕೊರೋನ ವೈರಸ್ ಭಾರತದಲ್ಲಿ ಹರಡುತ್ತಿರುವ ಪ್ರಮಾಣ ಹೆಚ್ಚಾಗಿರುವುದರಿಂದ ಶುಕ್ರವಾರದ ನಮಾಝ್ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಕರಾವಳಿ ಮುಸ್ಲಿಮರ ಪ್ರಮುಖ ಧಾರ್ಮಿಕ ಪಂಡಿತರಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಆದೇಶ ನೀಡಿದ್ದರು.
ಖಾಝಿಗಳ ಆದೇಶದ ಮೇರೆಗೆ ಇಂದಿನ ಜುಮಾ ನಮಾಝ್ ಲುಹರ್ ಅಝಾನ್ (ಮಧ್ಯಾಹ್ನದ ಬಾಂಗ್ 12:42ಕ್ಕೆ) ಆದ ಕೂಡಲೇ ನಮಾಝ್ ಗೆ ಮೊದಲಿನ ಖುತ್ಬಾ ಪಾರಾಯಣ ಮಾಡಲಾಗಿದ್ದು ಬಳಿಕ ಎರಡು ರಕಾಅತ್ ಜುಮಾ ನಮಾಝ್ ನಿರ್ವಹಿಸಿ ಸಾಮೂಹಿಕ ಪ್ರಾಥನೆಯನ್ನು ಚುಟುಕಾಗಿ ಮುಗಿಸಿ ಮುಸ್ಲಿಮರು ತಮ್ಮ ಮನೆಗಳಿಗೆ ತೆರಳಿದ್ದಾರೆ.
ನಮಾಝ್ ಎಂದಿಗಿಂತ ಬೇಗ ಮುಗಿದ ಹಿನ್ನೆಲೆಯಲ್ಲಿ ತಡವಾಗಿ ಮಸೀದಿಗೆ ಬಂದವರಿಗೆ ನಮಾಝ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಮನೆಗೆ ವಾಪಸ್ ಆಗಿರುವ ಘಟನೆಯೂ ಕೆಲವೆಡೆ ನಡೆದಿದೆ.

