ಬಂಟ್ವಾಳ: ಸೈಲೆಂಟ್ ಆಗಿ ಕಾಂಗ್ರೇಸ್ ಪಕ್ಷದೊಳಗಿನ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಗಳಿದ್ದು,ಇದಕ್ಕೆ ಸಾಕ್ಷಿಯಾಗಿ ಕಾಂಗ್ರೇಸ್ ನಾಯಕರ ನಡತೆಯಿಂದ ಬೇಸರಗೊಂಡ ಕಾಂಗ್ರೆಸ್ ಕಾರ್ಯಕರ್ತರ ದೊಡ್ಡ ಪಡೆಯೊಂದು ಬಿಜೆಪಿಯತ್ತ ಮುಖ ಮಾಡಿದ್ದು,ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಜಿಲ್ಲಾ ಮಟ್ಟದ ನಾಯಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

ತಾ.ಪಂ.ಮಾಜಿ ಸದಸ್ಯ, ಹಾಲಿ ಪುರಸಭಾ ಸದಸ್ಯರು ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆಯುವ ಅಥವಾ ಸದ್ಯ ರಾಜಕೀಯದಿಂದ ದೂರ ಉಳಿದು ಸಡ್ಡುಹೊಡೆದು ತೋರಿಸುವ ಚಿಂತನೆ ಮಾಡಿದೆ ಎಂದು ಬಲ್ಲ ಮೂಲಗಳು ಹೇಳಿವೆ.
ಮೂವತ್ತು ವರ್ಷಗಳಿಗೂ ಅಧಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಹಗಲಿರುಳು ಪಕ್ಷದ ಸಂಘಟನೆಯ ದೃಷ್ಟಿಯಿಂದ ದುಡಿದವರಿಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಮನ್ನಣೆಯನ್ನು ನೀಡಲಾಗಿಲ್ಲ ಎಂಬುದು ಕಾಂಗ್ರೆಸ್ ಜೊತೆ ಮುನಿಸಿಕೊಂಡ ಕಾರ್ಯಕರ್ತರ ಮಾತಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರವಿದ್ದ ಈ ಸಮಯದಲ್ಲಿ ಇಂತಹಾ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಯೂ ಸಾಕಷ್ಟು ಚರ್ಚೆಗಳಾಗಿವೆ.
ರಾಜ್ಯದಲ್ಲಿ ಅಧಿಕಾರ ಬಂದ ಕೂಡಲೇ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕೆಲವೊಂದು ಹುದ್ದೆಗಳಿಗೆ ಪೈಪೋಟಿ ಶುರುವಾಗಿದೆ.
ಮಲ್ಲಿಕಾ ಪಕಳ ಅವರಿಗೆ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಹುದ್ದೆ ನೀಡಿದ್ದೇ ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದರೆ,ಇದೀಗ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರ ಹೆಸರನ್ನು ಬಂಟ್ವಾಳ ಬೂಡ ಅಧ್ಯಕ್ಷ ಸ್ಥಾನಕ್ಕೆ ಇಲ್ಲಿನ ಮಾಜಿ ಮಂತ್ರಿಗಳು ಶಿಫಾರಸು ಮಾಡಿದ್ದಾರೆ ಎಂಬುದೇ ಮುನಿಸಿಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಬೂಡ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಮಂದಿ ಅಕಾಂಕ್ಷಿಗಳಾಗಿದ್ದು, ಅವರ ಯಾರ ಹೆಸರನ್ನು ಗಣನೆಗೆ ತೆಗೆದುಕೊಳ್ಳದೆ, ಮಾಜಿ ಸಚಿವ ಕಾಂಗ್ರೆಸ್ ನ ನಾಯಕರಾಗಿರುವ ಬಿ.ರಮಾನಾಥ ರೈ ಅವರ ಜೊತೆ ಗುರುತಿಸಿಕೊಂಡಿರುವ ಬೇಬಿ ಕುಂದರ್ ಅವರ ಹೆಸರನ್ನು ರಾಜ್ಯಕ್ಕೆ ಕಳುಹಿಸಿದ್ದಲ್ಲದೆ, ಇನ್ನೇನು ಅದೇಶ ಕೂಡ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಆದರೆ ಈ ನಡುವೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಬೂಡ ಅಧ್ಯಕ್ಷ ಸ್ಥಾನಕ್ಕೆ ಬೇಬಿ ಕುಂದರ್ ಅವರನ್ನು ನೇಮಕ ಮಾಡದಂತೆ ಕಾನೂನಾತ್ಮಕ ಹೋರಾಟ ಮಾಡಿ ತಾತ್ಕಾಲಿಕ ತಡೆ ಹಿಡಿದಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
ಆದರೆ ಈ ತಡೆ ತಾತ್ಕಾಲಿಕವಾಗಿದ್ದು ಬೇಬಿ ಕುಂದರ್ ಅವರೇ ಬೂಡ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ವಿಜಯ ಬ್ಯಾಂಕ್ ಉದ್ಯೋಗಿಯಾಗಿದ್ದ ಇತ್ತೀಚಿಗೆ ಪಕ್ಷದೊಳಗೆ ಸೇರ್ಪಡೆಗೊಂಡ ಬೇಬಿ ಕುಂದರ್ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಮಾಜಿ ಸಚಿವರ ನೇತ್ರತ್ವದ ಸಹಕಾರಿ ಬ್ಯಾಂಕ್ ಒಂದರ ಸಿ.ಒ.ಹುದ್ದೆಯನ್ನು ನೀಡಲಾಗಿದೆ.
ಇದೀಗ ಅದು ಎರಡು ಸಾಲದೆಂಬಂತೆ ಬೂಡ ಅಧ್ಯಕ್ಷ ಸ್ಥಾನವನ್ನು ನೀಡಿ ಕಾರ್ಯಕರ್ತರ ಭಾವನೆಗಳಿಗೆ ಮೋಸಮಾಡಲು ಹೊರಟಿದ್ದಾರೆ ಎಂದು ಅವರ ಆರೋಪವಾಗಿದೆ ಎಂದು ಹೇಳಲಾಗಿದೆ.
ಎಲ್ಲಾ ವರ್ಗದ ಮತ್ತು ಅವಕಾಶ ಸಿಗದ ನೂರಾರು ಕಾರ್ಯಕರ್ತರಿದ್ದು, ಅವರ ಭಾವನೆಗಳಿಗೆ ಬೆಲೆ ನೀಡಬೇಕು ಎಂಬುದು ಸಾಮಾನ್ಯ ಕಾರ್ಯಕರ್ತರ ಮನಸ್ಸು ಆಗಿದೆ.
ಅವಕಾಶ ನೀಡುವ ಸಂದರ್ಭದಲ್ಲಿ ಅದರೂ ಪಕ್ಕಕ್ಕೆ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರ ಜವಾಬ್ದಾರಿ ಅಥವಾ ಹುದ್ದೆಯನ್ನು ನೀಡುವ ಯೋಚನೆ ಹಿರಿಯ ನಾಯಕರುಗಳು ಮಾಡಬೇಕು ಎಂಬ ಮಾತನ್ನು ಭಿನ್ನಮತೀಯ ರು ಹೇಳುತ್ತಿದ್ದಾರೆ.
ಹಾಗಾಗಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾರ್ಯಕರ್ತರ ಗುಂಪೊಂದು ಸೈಲೆಂಟ್ ಆಗಿ ಇರುವುದು ಅಥವಾ ಸೂಕ್ತವಾದ ಸ್ಥಾನಮಾನವನ್ನು ಬಿಜೆಪಿ ನೀಡಿದರೆ ಲಾಂಗ್ ಜಂಪ್ ಮಾಡಿ ಕಾಂಗ್ರೆಸ್ ಗೆ ಟಾಂಗ್ ನೀಡುವುದು ಹೀಗೆ ಎರಡು ದೋಣಿಯಲ್ಲಿ ಕುಳಿತು ಕೊಂಡು ಯೋಜನೆ ಸಿದ್ದಪಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಬಿಜೆಪಿ ಜಿಲ್ಲಾ ಮಟ್ಟದ ನಾಯಕರ ಜೊತೆ ಯಾವುದೇ ಸದ್ದಿಲ್ಲದೆ ಗೌಪ್ಯವಾಗಿ ಪಿಸುಗುಟ್ಟುವ ಮಾತುಗಳು ಕೇಳಿಬರುತ್ತಿದೆ.
ನಾಯಕರು ನಡೆಸಿಕೊಂಡ ಕ್ರಮದ ಬಗ್ಗೆ ಬೇಸರಗೊಂಡ ಕಾರ್ಯಕರ್ತರು ಕೆಲವೊಂದು ನಾಯಕರಲ್ಲಿ ಪ್ರಸ್ತಾಪಮಾಡಿದ್ದು, ಇವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.ದುಡುಕಿ ನಿರ್ಧಾರ ಕೈಗೊಳ್ಳಬೇಡಿ, ಚುನಾವಣಾ ಸಂದರ್ಭದಲ್ಲಿ ಪಕ್ಷ ತೊರೆಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ಇದರಿಂದ ಮುಂದಿನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು, ತಾಳ್ಮೆಯಿಂದ ಇರಿ ಎಲ್ಲವನ್ನು ಸಮಯನೋಡಿಕೊಂಡು ಸರಿಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಕಾರ್ಯಕರ್ತರ ಬೇಡಿಕೆಯನ್ನು ಈಡೇರಿಸಲು ಇಲ್ಲಿನ ನಾಯಕರು ಮುಂದೆ ಬರುವುದಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಕೈ ತೊರೆದು ಕಮಲದತ್ತ ಮುಖಮಾಡಿದ್ದಾರೆ ಎಂದು ಹೇಳಲಾಗಿದೆ.