Wednesday, February 12, 2025

ಬಾವಿಯಲ್ಲಿ ಕುಡಿಯಲು ಯೋಗ್ಯವಲ್ಲಿದ ನೀರು, ಕೆಟ್ಟ ಬೋರ್‌ವೆಲ್… ಬಂಟ್ವಾಳ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಅಹಾಕಾರ

ಬಿ.ಸಿ.ರೋಡ್ : ಬಂಟ್ವಾಳ ತಾಲೂಕಿನ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ. ಆದರೆ ಪುದು ಗ್ರಾಮದಲ್ಲಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಮಾರುಕಟ್ಟೆಯ ಬಾಟಲಿ ನೀರನ್ನೇ ಬಳಸುವ ಪರಿಸ್ಥಿತಿ ಎದುರಾಗಿದೆ. ಹಾಗೂ ಮೇರಮಜಲು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಬಾವಿಯಿಂದ ಕೆಂಪು ಬಣ್ಣದ ನೀರು : ಪುದು ಗ್ರಾಮದಲ್ಲಿ ನದಿಗೆ ಸಮೀಪವಾಗಿ ಬಾವಿಯಿಂದ ನೀರು ಟ್ಯಾಂಕಿಗೆ ಪೂರೈಕೆಯಾಗುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಈ ಬಾವಿಯಲ್ಲಿ ಮಣ್ಣು ಮಿಶ್ರಿತ ಕೆಂಪು ಬಣ್ಣದ ನೀರು ಸರಬಾರಾಜಾಗುತ್ತಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಆ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ನೀರು ಮಲಿನವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೇ ದೃಢಪಡಿಸಿದೆ. ಜೊತೆಗೆ ಹತ್ತಿರದಲ್ಲಿರುವ ಕೊಳವೆ ಬಾವಿಯ ಪಂಪ್ ಹಾಳಾಗಿದ್ದು ನೀರು ಬರುತ್ತಿಲ್ಲ. ಹೀಗಾಗಿ ಅಲ್ಲಿನ ಜನರು ಕುಡಿಯುವ ನೀರನ್ನು ಮಾರ್ಕೆಟ್ ನಿಂದ ಹಣಕೊಟ್ಟು ತರುವಂತಾಗಿದೆ. ಪಂಚಾಯತ್ ವತಿಯಿಂದ ಹೊಸದಾಗಿ ಕೊಳವೆ ಬಾವಿ ನಿರ್ಮಿಸಿದರೂ ಅದರಿಂದ ನೀರು ಸಿಕ್ಕಿಲ್ಲ. ಹೀಗಾಗಿ ಪುದು ಗ್ರಾಮದ ನಾಲ್ಕು ಪ್ರದೇಶಗಳಾದ ಸುಜೀರು, ದತ್ತನಗರ, ಮಲ್ಲಿ, ದೈಯಡ್ಕದ ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಅಬ್ಬೆಟ್ಟುವಿನಲ್ಲಿ ನೀರಿಗಾಗಿ ಜನರ ಪರದಾಟ : ಮೇರಮಜಲು ಗ್ರಾಮದ ಅಬ್ಬೆಟ್ಟು ಎಂಬಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ಚಿಂತೆಯಲ್ಲಿದ್ದಾರೆ. ಅಂತರ್ಜಲ ಮಟ್ಟ ಕಡಿಮೆಯಾಗಿದ್ದು ಮನೆಗಳಲ್ಲಿ ಬಾವಿಯ ನೀರು ಆವಿಯಾಗಿದೆ. ಸಂಪೂರ್ಣವಾಗಿ ಪಂಚಾಯತ್ ನೀರಿನ ವ್ಯವಸ್ಥೆಗೆ ಅವಲಂಬಿತರಾಗಿದ್ದು ಗ್ರಾಮದ ಕೊಳವೆ ಬಾವಿ ಕೂಡ ಬತ್ತಿ ಹೋಗಿದೆ. ಹೊಸ ಕೊಳವೆ ಬಾವಿಗಾಗಿ ಸ್ಥಳ ಪರಿಶೀಲಿಸಿದ್ದರೂ ಅಲ್ಲಿಗೆ ಕೊಳವೆ ಬಾವಿಯ ಲಾರಿ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಕಷ್ಟ ಎದುರಾಗಿದೆ. ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ.

ಬಂಟ್ವಾಳದ ಗ್ರಾಮೀಣ ಭಾಗಗಳಲ್ಲಿಯೂ ಕುಡಿಯುವ ನೀರಿಗಾಗಿ ನೇತ್ರಾವತಿ ನದಿಯನ್ನೇ ಆಶ್ರಯಿಸಿದ್ದು, ಈ ವರ್ಷ ನೇತ್ರಾವತಿ ತುಂಬಿ ಹರಿಯುತ್ತಿದ್ದಾಳೆ. ತುಂಬೆ ಡ್ಯಾಮ್‌ನಲ್ಲಿ ಪ್ರಸ್ತುತ ೬ ಮೀ. ನೀರಿನ ಸಂಗ್ರಹವಿದೆ. ಶಂಭೂರು ಡ್ಯಾಮ್‌ನಲ್ಲೂ ಸಮುದ್ರ ಮಟ್ಟದಿಂದ ೧೮.೯ ಮೀ. ನೀರಿನ ಸಂಗ್ರಹವಿದೆ. ಬಂಟ್ವಾಳ ಜಕ್ರಿಬೆಟ್ಟು ಬಳಿ ನೂತನ ಡ್ಯಾಂ ನಿರ್ಮಾಣದಿಂದ ಈ ಭಾಗದಲ್ಲಿಯೂ ನದಿನೀರು ಶೇಖರಣೆಯಾಗಿದ್ದು, ಈ ಭಾಗದಲ್ಲಿ ಸುತ್ತ ಮುತ್ತ ಎಲ್ಲಾ ಬಾವಿ, ಕೆರೆಗಳಲ್ಲಿ ಒಳಹರಿವು ಜಾಸ್ತಿಯಾಗಿದ್ದು ಬಂಟ್ವಾಳ ಕಸ್ಬಾ, ನಾವೂರು ಗ್ರಾಮ, ಕಾವಳಮೂಡೂರು ಸುತ್ತಮುತ್ತಲ ಪ್ರದೇಶದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಇಲ್ಲ.

* ಪುದು ಗ್ರಾಮದಲ್ಲಿ ಬಾವಿಯಲ್ಲಿ ಕೆಂಪುಮಿಶ್ರಿತ ನೀರು.

* ಮೇರಮಜಲಿನಲ್ಲಿ ಬೋರ್‌ವೆಲ್ ಲಾರಿ ಹೋಗಲು ರಸ್ತೆ ಸಮಸ್ಯೆ

ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ನೀರು ಸದ್ಬಳಕೆಯ ಮಾಹಿತಿ ಕಾರ್ಯಾಗಾರ ನಡೆಯುತ್ತಿದ್ದು, ಪ್ರತಿ ದಿನದ ವರದಿಯನ್ನು ತಾಲೂಕು ಪಂಚಾಯತ್‌ಗೆ ರವಾನಿಸಲಾಗಿದ್ದು ಮಾರ್ಚ್ ಎಪ್ರಿಲ್ ವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ.

– ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತ್ ಬಂಟ್ವಾಳ

ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿ ಇರುವ ಬೋರ್‌ವೆಲ್‌ನಲ್ಲಿ ನೀರು ಕಡಿಮೆ ಇದ್ದು, ಜನಜೀವನ್ ಮಿಷನ್ ಯೋಜನೆಯಡಿಯಲ್ಲಿ ಇನ್ನೊಂದು ಹೊಸಬೋರ್‌ವೆಲ್ ತೋಡಲಾಗುವುದು. ಮತ್ತು ಮೇರಮಜಲು ಗ್ರಾಮದ ಕೆಲವು ಕಡೆ ನೀರಿನ ಸಮಸ್ಯೆ ತಲೆದೋರಿದ್ದು, ಪರ್ಯಾಯ ವ್ಯವಸ್ಥೆಗೆ ನಡೆಸುತ್ತಾ ಇದ್ದು ಅದಷ್ಟು ಬೇಗ ಇಲ್ಲಿನ ಸಮಸ್ಯೆ ಬಗೆಹರಿಸಲಾಗುವುದು.

– ರವಿ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಬಂಟ್ವಾಳ

ಬಂಟ್ವಾಳ ತಾಲೂಕಿನ ಪುದು ಮತ್ತು ಮೇರಮಜಲು ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು ಜನರು ಸಂಕಷ್ಟದಲ್ಲಿದ್ದಾರೆ. ಪುದು ಗ್ರಾಮದಲ್ಲಿ ಹೊಸ ಕೊಳವೆ ಬಾವಿಯನ್ನು ನಿರ್ಮಾಣ ಮಾಡುವ ಚಿಂತನೆಯಲ್ಲಿದ್ದೇವೆ. ಅದೇ ರೀತಿ ಮೇರಮಜಲಿನಲ್ಲಿ ಕೊಳವೆ ಬಾವಿಯ ಲಾರಿ ಹೋಗಲು ಸರಿಯಾದ ರಸ್ತೆ ಇಲ್ಲದೆ ಇರುವುದರಿಂದ ಮೊದಲಿಂದ ಪರ್ಯಾಯ ಮಾರ್ಗವನ್ನು ಹುಡುಕಿ ಕೂಡಲೇ ಕೊಳವೆ ಬಾವಿ ನಿರ್ಮಾಣ ಮಾಡಲಿದ್ದೇವೆ.

ವೈಎ ಸರಪಾಡಿ

ಸರಪಾಡಿ ಡ್ಯಾಂ ಬಳಿ ನೇತ್ರಾವತಿಯಲ್ಲಿ ನೀರು

ಪುದು ಪಂಚಾಯತ್ ಬಳಿ ಬೋರ್‌ವೆಲ್‌ನಿಂದ ಕೆಂಪು ಮಿಶ್ರಿತ ನೀರು ಬರುತ್ತಿರುವುದು.

ವಿಶೇಷ ವರದಿ -ಯಾದವ ಕುಲಾಲ್ ಅಗ್ರಬೈಲು

More from the blog

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...