ಬಂಟ್ವಾಳ: ಆಸ್ತಿ ತೆರಿಗೆಯ ಜೊತೆ ಹೆಚ್ಚುವರಿಯಾಗಿ ಕಸದ ಶುಲ್ಕವನ್ನು ವಸೂಲಿ ಮಾಡುವ ಮೂಲಕ ಜನರಿಗೆ ಮತ್ತಷ್ಟು ಹೊರೆ ಹಾಕಿರುವ ಪುರಸಭೆಯ ಕಾರ್ಯವೈಖರಿಗೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದಾಗ ಅಧಿಕಾರಿಗಳು ಜನರ ಮೇಲೆ ಕಸದ ಮೇಲೆ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವುದು ಸರಿಯಲ್ಲ,ಈ ಬಗ್ಗೆ ಸಾರ್ವ ಜನಿಕರಿಂದ ತನಗೂ ದೂರು ಬಂದಿದೆ ಎಂದರು. ಬಂಟ್ವಾಳದಲ್ಲಿ ಕಸ ಸಂಗ್ರಹದ ವ್ಯವಸ್ಥೆಯೇ ಅವ್ಯವಸ್ಥೆಯಾಗಿರುವಾಗ ಪುರವಾಸಿಗಳಿಗೆ ಹೆಚ್ಚುವರಿ ಹೊರೆಯನ್ನು ವಿಧಿಸಿರುವುದು ಅಸಮಂಜಸವಾಗಿದೆ. ಈ ಬಗ್ಗೆ ಆಡಳಿತಾಧಿಕಾರಿಯವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು,ಚುನಾವಣೆಯ ಬಳಿಕ ಈ ಕುರಿತಂತೆ ಕ್ರಮ ಕೈಗೊಳ್ಳ ಲಾಗುವುದು ಎಂದರು. ಜಿಲ್ಲಾಧಿಕಾರಿಯವರು, ಸಹಾಯಕ ಕಮಿಷನರ್ ಅವರು ಒಂದು ದಿನ ಪೂರ್ತಿ ಪುರಸಭೆಯಲ್ಲಿದ್ದು , ಇಲ್ಲಿ ನಡೆದಿರುವ ಎಲ್ಲಾ ಅವ್ಯವಸ್ಥೆ,ಹಗರಣಗಳ ಪರಿಶೀಲನೆ ನಡೆಸುವ ಮಾತು ಕೊಟ್ಟಿದ್ದರೂ , ಅವರಿಗಿನ್ನು ಬರಲು ಪುರುಸೊತ್ತು ಸಿಗಲಿಲ್ಲ ಎಂದು ಶಾಸಕ ರಾಜೇಶ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು. ಖಂಡನೆ: ಕಸದ ಶುಲ್ಕ ಈ ಹಿಂದಿನಂತೆ ಪಡೆಯವುದಕ್ಕೆ ಅಭ್ಯಂತರವಿಲ್ಲ, ಆದರೆ ಕಸ ಸಂಗ್ರಹದ ವ್ಯವಸ್ಥೆಯಲ್ಲಿ ಸರಿಯಾಗದೆ ಶುಲ್ಕ ವಸೂಲಿ ಮಾಡುವ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ ಮತ್ತು ಇದಕ್ಕೆ ತಮ್ಮ ವಿರೋಧವಿದೆ ಎಂದು ಪುರಸಭೆಯ ಮಾಜಿ ಸದಸ್ಯ ದೇವದಾಸ ಶೆಟ್ಟಿ ಹೇಳಿದರು.
