ಬಂಟ್ವಾಳ : ದ.ಕ.ಜಿಲ್ಲಾ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡುವ ದೊಡ್ಡ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರದ್ದಾಗಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಕರೆ ನೀಡಿದ್ದಾರೆ.
ಅವರು ಎ.12ರಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಳೆದ 10 ವರ್ಷಗಳಲ್ಲಿ ದ.ಕ.ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಹಾಗೂ ಜನ ಸಾಮಾನ್ಯರ ಕಷ್ಟಗಳನ್ನು ನಿವಾರಿಸುವಲ್ಲಿ ನಳಿನ್ ಕುಮಾರ್ ಕಟೀಲ್ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಗೆ ಎನ್‌ಡಿಎ ಸರಕಾರದಿಂದ ಸಂಸದರ ಮೂಲಕ ಯಾವ ಘನಂದಾರಿ ಕೆಲಸ ಆಗಿದೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ಅಭಿವೃದ್ದಿಗಾಗಿ, ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಹಾಗೂ ಕೋಮು ಸೌಹಾರ್ಧ ಕಾಪಾಡಲು ಮತದಾರರು ಖಂಡಿತ ಕಾಂಗ್ರೆಸ್‌ನ ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸ ವ್ಯಕ್ತ ಮಾಡಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ 47 ವಲಯ , 253 ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಈಗಾಗಲೇ ನಡೆಸುವ ಮೂಲಕ ಚುನಾವಣೆಗೆ ಸಿದ್ದತೆಗಳು ಆಗಿದೆ.
ಪಕ್ಷದ ಅಭ್ಯರ್ಥಿ ಮಿಥುನ್ ರೈ ಅವರು ಬಹಿರಂಗ ಸಭೆಗಳಲ್ಲಿ ಹಾಗೂ ಮಂದಿರ, ಮಸೀದಿ, ಚರ್ಚ್‌ನಲ್ಲಿ ಆಶೀರ್ವಾದ ಪಡೆಯುವ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲ ವಲಯಗಳಲ್ಲಿ ಮಾಜಿ ಸಚಿವರ ನೇತೃತ್ವದಲ್ಲಿ ಬಹಿರಂಗ ಸಭೆಗಳನ್ನು ನಡೆಸಲಾಗಿದೆ ಎಂದರು.
ನಮ್ಮ ಪಕ್ಷದ ಹಿರಿಯ ನಾಯಕರಾದ ಜನಾರ್ದನ ಪೂಜಾರಿ ಅವರು ಮಿಥುನ್ ರೈ ಗೆಲುವಿಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರನ ದೇವರ ಆಶೀರ್ವಾದ ಮೂಲಕ ಹಾರೈಸಿದ್ದಾರೆ. ಬಿಲ್ಲವ ಸಮಾಜ ಜನಾರ್ದನ ಪೂಜಾರಿಯವರ ಮನವಿಯನ್ನು ಖಂಡಿತವಾಗಿಯೂ ಪುರಸ್ಕರಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಪ್ರಮುಖರಾದ ಬಿ.ಎಚ್. ಖಾದರ್, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬಿ. ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಜನಾರ್ದನ ಚಂಡ್ತಿಮಾರ್, ಅಬ್ಬಾಸ್ ಆಲಿ, ಎಪ್ರೇಮ್ ಸಿಕ್ವೇರಾ, ಜಗದೀಶ ಕೊಯಿಲ, ಗಂಗಾಧರ ಪೂಜಾರಿ , ವಾಸು ಪೂಜಾರಿ, ಚೆನ್ನಪ್ಪ ಸಾಲ್ಯಾನ್, ರಾಜೀವ್ ಕಕ್ಯೆಪದವು ಮತ್ತು ಇತರರು ಉಪಸ್ಥಿತರಿದ್ದರು.
