ಬಂಟ್ವಾಳ: ಶನಿವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ,ಸಿಡಿಲಿನಬ್ಬರ, ಮಿಂಚಿನಿಂದ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ5 ದಿನಗಳ ಕಾಲ ಆರಾಧಿಸಲ್ಪಟ್ಟ ಶ್ರೀಶಾರದಾ ಮಾತೆಯ ಶೋಭಾಯತ್ರೆಯ ಸಂಭ್ರಮಕ್ಕೆ ತಣ್ಣೀರೆರಚಿತು.


ರಾತ್ರಿ ಸುಮಾರು 8 ಗಂಟೆಯ ವರೆಗೂ ಭಕ್ತಾದಿಗಳು ದೇವಳದ ಮುಂಭಾಗದಲ್ಲಿರಿಸಲಾದ ಶಾರದಾ ಮಾತೆಯ ದರ್ಶನ ಪಡೆದು ಸಂತೃಪ್ತರಾಗಿದ್ದರು. ಹುಲಿ,ಶಾರ್ದೂಲ, ಬಡ್ಡಕಟ್ಟೆ ಯುವಕ ಮಂಡಲದಿಂದ ವರ್ಷಂಪ್ರತಿಯಂತೆ ಅನಾರ್ಕಲಿ ಕುಣಿತ ಸಹಿತ ಸಣ್ಣಪುಟ್ಟ ವೇಷಗಳಿಂದ ಜನರಲ್ಲಿ ಉತ್ಸಾಹ ಮತ್ತು ಸಂಭ್ರಮದ ಕಳೆಗಟ್ಟಿತ್ತು. ಶಾರದಾ ಮಾತೆಯ ಮುಂಭಾಗದಲ್ಲಿ ಈ ವೇಷಧಾರಿಗಳಿಗೆ ತಮ್ಮ ಪ್ರದರ್ಶನಕ್ಕು ಅವಕಾಶ ಕಲ್ಪಿಸಲಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.ಈ ಸಂದರ್ಭ ಸಿಡಿಲಿನಬ್ಬರ,ಮಿಂಚು ಮತ್ತು ಸುರಿಯಲಾರಂಭಿಸಿದ ಮಳೆಯಿಂದ ದೇವಳದ ವಠಾರದಲ್ಲಿ ಸೇರಿದ ಜನರು,ವೇಷಗಳು ಚದುರಿದರು. ಅಂಗಡಿ ಜಗಲಿಯಲ್ಲಿ ಮಳೆಗೆ ಆಶ್ರಯಪಡೆದರೆ,ಕೆಲವರು ತಮ್ಮ ಮನೆಯತ್ತ ಸಾಗಿದರು.ಸುಮಾರು ಮೂರ್ನಾಲ್ಕು ತಾಸುಗಳ ಕಾಲ ಮಳೆ,ಸಿಡಿಲಿನ ಅಬ್ಬರ ಕಡಿಮೆಯಾಗಲೇ ಇಲ್ಲ..ಕಳೆದ ಬಾರಿ ಕರೋನ ಮಹಾಮಾರಿ ಯಿಂದಾಗಿ ಬಂಟ್ವಾಳದಲ್ಲಿ ನಡೆಯಿವ ವೈಭವಯುತ ಶಾರದೋತ್ಸವ ಕಳೆಗುಂದಿದ್ದರೆ. ಈ ಬಾರಿ ಸರಳವಾಗಿಯಾದರೂ ಒಂದಷ್ಟು ಜನರಲ್ಲಿ ಸಂಭ್ರಮ ಮನೆಮಾಡಿತ್ತು .ಆದರೆ ಮಳೆರಾಯ ಮನಿಸಿಕೊಂಡಿದರಿಂದ ಇದೆಲ್ಲದಕ್ಕು ತಣ್ಣೀರೆರಚಿತು.ಮಳೆಯ ನಡುವೆಯೇ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಿತು.ದೇವಳದ ವಠಾರದಿಂದ ಶಾರದೆಯನ್ನು ಭಜಕರು ಹೆಗಲಲ್ಲೇ ಹೊತ್ತುಕೊಂಡು ರಥಬೀದಿಯಲ್ಲಿ ಸಾಗಿ ಬೈಪಾಸ್ ಶ್ರೀರಾಮಮಂದಿರದ ವರೆಗೆ ತೆರಳಿ ಅಲ್ಲಿಂದ ವಾಪಾಸ್ ಬಂದು ಬಡ್ಡಕಟ್ಟೆ ಹನುಮಾನ್ ದೇವಳದವರೆಗೆ ತೆರಳಿ ವಾಪಾಸ್ ಆದೇ ಮಾರ್ಗವಾಗಿ ಬಂದು ದೇವಳದ ಹಿಂಬಾಗದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.ಇದರೊಂದಿಗೆ ಐದುದಿನದ 54 ನೇ ವರ್ಷದ ಶಾರದೋತ್ಸವಕ್ಕೆ ತೆರೆ ಬಿತ್ತು.

