ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕುಸಿತ ಆಗಿರುವ ಹಿನ್ನೆಲೆಯಲ್ಲಿ ಎ. 11ರಿಂದ ಮೂರು ದಿನ ಮಾತ್ರ ರೈತರು ನೀರೆತ್ತುವಂತೆ ಮೆಸ್ಕಾಂ ನೋಟಿಸು ಜಾರಿ ಮಾಡಿದ್ದು ನೀರಿನ ಬರದ ಬಿಸಿ ನದಿ ಪಾತ್ರದ ಕೃಷಿಕ ವರ್ಗಕ್ಕೂ ಮುಟ್ಟಲಾರಂಭಿಸಿದೆ.
ನೇತ್ರಾವತಿ ನದಿ ಪಾತ್ರದ ಗ್ರಾಮಗಳಾದ ತುಂಬೆ, ಕಳ್ಳಿಗೆ, ಬಿ.ಮೂಡ, ಬಿ.ಕಸ್ಬಾ, ನಾವೂರು, ಮಣಿನಾಲ್ಕೂರು, ಸಜೀಪಮುನ್ನೂರು, ಸಜೀಪಮೂಡ, ಪಾಣೆಮಂಗಳೂರು, ನರಿಕೊಂಬು. ಶಂಭೂರು, ಬಾಳ್ತಿಲ, ಬರಿಮಾರು, ಕಡೇಶಿವಾಲಯ ತನಕ ಹದಿನಾಲ್ಕು ಗ್ರಾಮಗಳ ನದಿಯ ಎರಡು ಬದಿಯಲ್ಲಿ ವಿದ್ಯುತ್ ಬಳಸಿ ನೀರೆತ್ತುವ ರೈತರಿಗೆ ಇದೀಗ ಕಂಟಕ ಪ್ರಾರಂಭವಾಗಿದೆ.
ಪ್ರಸ್ತುತ ನೀಡಿರುವ ಆದೇಶದಲ್ಲಿ ವಾರಕ್ಕೆ ಮೂರು ದಿನ ಮಾತ್ರ ನೀರೆತ್ತುವಂತೆ ಸೂಚಿಸಿದೆ. ಅದು ಯಾವ ದಿನ, ಎಷ್ಟು ಹೊತ್ತಿನಿಂದ ಎಷ್ಟರ ತನಕ, ಸದ್ರಿ ಸ್ಥಳದಲ್ಲಿ ನದಿ ನೀರಿನ ಲಭ್ಯತೆ ಇದೆಯೇ ಎಂಬಿತ್ಯಾದಿ ವಿವರಗಳು ಇಲ್ಲ.

ವಾಣಿಜ್ಯ ಕೃಷಿ ಮತ್ತು ಆಹಾರ ಕೃಷಿಗೂ ಇದೇ ನೀತಿ ಅನುಸರಿಸಿದೆಯೇ ಎಂಬ ವಿವರಗಳು ಇಲ್ಲ. ನದಿ ಪಾತ್ರದಲ್ಲಿ ಸರಕಾರಿ ಪ್ರಾಯೋಜಿತ ಕೃಷಿ ಉಪಯೋಗದ, ಕುಡಿಯುವ ಉದ್ದೇಶದ ಸ್ಥಾವರಗಳ ಬಳಕೆಗೂ ಇದೇ ನೀತಿ ಅನ್ವಯವೇ ಎಂಬುದು ಸ್ಪಷ್ಟವಾಗಿಲ್ಲ.
ಜಿಲ್ಲಾಽಕಾರಿಗಳಿಂದ ಈ ಆದೇಶ ಜಾರಿಯಾಗಿ 15 ದಿನಗಳು ಕಳೆದಿದೆ. ಮೆಸ್ಕಾಂ ಸಮಸ್ಯೆಯನ್ನು ಇದುವರೆಗೆ ನಿಬಾಯಿಸಿಕೊಂಡು ಬಂದಿದೆ. ಮಳೆಯಾಗಿ ಕಳೆದ ವರ್ಷದಂತೆ ನೀರು ಹರಿದು ಬರಬಹುದು ಎಂಬ ತರ್ಕವನ್ನು ಮಾಡಲಾಗಿತ್ತಾದರೂ ಅಂತಹ ನೀರಿನ ಲಭ್ಯತೆ ಇಲ್ಲದ ಕಾರಣಕ್ಕೆ ನೊಟೀಸು ಜಾರಿ ಮಾಡುವುದಕ್ಕೆ ಮುಂದಾಗಿದೆ.
ನೇತ್ರಾವತಿ ನದಿ ತುಂಬೆ ಡ್ಯಾಂ ಮತ್ತು ಶಂಭೂರು ಎಎಂಆರ್ ಡ್ಯಾಂ ವ್ಯಾಪ್ತಿಯ ರೈತಾಪಿ ವರ್ಗದ ಐ.ಪಿ.ಸೆಟ್‌ಗೆ ವಿದ್ಯುತ್ ನಿಲುಗಡೆ ಮಾಡಲು ಆದೇಶ ಜಾರಿ ಆಗಿದ್ದರೂ, ಶಂಭೂರು ಎಎಂಆರ್ ಡ್ಯಾಂ ವ್ಯಾಪ್ತಿಯ ಕೈಗಾರಿಕೆ ಉದ್ದೇಶದ ಎಂಆರ್‌ಪಿಎಲ್, ಸೆಝ್ ಸಾವಿರ ಎಚ್‌ಪಿ ಸಾಮರ್ಥ್ಯದ ಐಪಿ ಸೆಟ್‌ಗಳಿಗೆ ಇದೇ ಆದೇಶ ಅನ್ವಯವಾಗಿಲ್ಲ ಎಂದು ಮೆಸ್ಕಾಂ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಆದೇಶ ಜಾರಿ
ಬಂಟ್ವಾಳ ಮೆಸ್ಕಾಂ ಉಪ ವಿಭಾಗ 1,2 ರಲ್ಲಿ ಪ್ರಥಮ ಹಂತದಲ್ಲಿ ನದಿಪಾತ್ರದ ಎರಡು ದಂಡೆಗಳಲ್ಲಿ ಇರತಕ್ಕ 120 ಐ.ಪಿ. ಸೆಟ್‌ಗಳ ಸಂಪರ್ಕ ನಿಲುಗಡೆ ಆದೇಶ ಜಾರಿ ಆಗಿದೆ.
ಇದರಲ್ಲಿ 20 ಐ.ಪಿ.ಸೆಟ್‌ಗಳು ತಲಾ 10 ಎಚ್.ಪಿ. ಸಾಮರ್ಥ್ಯದ್ದಾಗಿದೆ. 44 ಐ.ಪಿ.ಸೆಟ್‌ಗಳು ತಲಾ 5 ಎಚ್. ಪಿ. ಸಾಮರ್ಥ್ಯದ್ದಾಗಿದೆ. 66 ಐ.ಪಿ. ಸೆಟ್‌ಗಳು ತಲಾ ೩ ಎಚ್.ಪಿ. ಸಾಮರ್ಥ್ಯದ್ದಾಗಿದೆ. ಅಂದರೆ ಈ ಎಲ್ಲ 120 ಐ.ಪಿ. ಸೆಟ್‌ಗಳು ಒಟ್ಟು 200+220+198= 618 ಎಚ್.ಪಿ. ಬಳಕೆ ಆಗುತ್ತದೆ.
* ಶಂಭೂರು ಎಎಂಆರ್ ಡ್ಯಾಂ ವ್ಯಾಪ್ತಿಯಲ್ಲಿ ಎಂಆರ್‌ಪಿಎಲ್, ಎಸ್‌ಇಝಡ್ ಕೈಗಾರಿಕಾ ಉದ್ದೇಶದ ನೀರು ಸರಬರಾಜು ತಲಾ 500 ಎಚ್‌ಪಿ ಬಳಸುತ್ತದೆ. ಅಂದರೆ ನೇರವಾಗಿ 1000 ಎಚ್.ಪಿ. ಸಾಮರ್ಥ್ಯ ಪಂಪ್ ಬಳಸಿ ನೀರೆತ್ತುತ್ತದೆ.
* ಲೆಕ್ಕಾಚಾರದಂತೆ ಕೈಗಾರಿಕಾ ಕೃಷಿ ಉದ್ದೇಶದ ನೀರೆತ್ತುವುದಕ್ಕೆ 1000 ಎಚ್‌ಪಿ, ರೈತರ 120 ಪಂಪ್‌ಸೆಟ್‌ಗಳಿಂದ ಕೃಷಿ ಉದ್ದೇಶಕ್ಕೆ 618 ಎಚ್.ಪಿ. ಬಳಕೆ ಆಗುತ್ತದೆ. ಲೆಕ್ಕಾಚಾರದಂತೆ ರೈತಾಪಿ ವರ್ಗ ಬಳಸುವ ನೀರು ಕೈಗಾರಿಕಾ ಉದ್ದೇಶದ ಸಾಮರ್ಥ್ಯಕ್ಕಿಂತ 318 ಎಚ್‌ಪಿ ಕಡಿಮೆಯೇ ಇದೆ. ಹಾಗಾಗಿ ಮೊದಲು ಕೈಗಾರಿಕಾ ಉದ್ದೇಶದ ನೀರು ಸರಬರಾಜು ವ್ಯವಸ್ಥೆಯನ್ನು ನಿಲುಗಡೆ ಮಾಡಬೇಕು ಹೊರತು ಕೃಷಿ ಉದ್ದೇಶದ್ದಲ್ಲ ಎನ್ನಲಾಗಿದೆ.
* ತುಂಬೆ ಡ್ಯಾಂ ವ್ಯಾಪ್ತಿಯಲ್ಲಿ ಸಜೀಪಮುನ್ನೂರು ಮಡಿವಾಳಪಡ್ಪು ಮಂಗಳೂರು ವಿವಿ ಕೊಣಾಜೆಗೆ ನೀರು ಸರಬರಾಜು 100 ಎಚ್‌ಪಿ, ಸಜೀಪಮೂಡದಲ್ಲಿ ಮುಡಿಪು ಇನ್‌ಫೋಸಿಸ್ 90 ಎಚ್‌ಪಿ., ಸಜೀಪಮೂನ್ನೂರು ಕೃಷಿ ಏತ ನೀರಾವರಿ 60 ಎಚ್‌ಪಿ. ಒಟ್ಟು 250 ಎಚ್.ಪಿ ಬಳಕೆ ಆಗುತ್ತದೆ.
ನೀರಿನ ಮಟ್ಟ
ತುಂಬೆ ಡ್ಯಾಂನ- ಎ. 11ರಂದು ನೀರಿನ ಮಟ್ಟ 5.80 ಮೀಟರ್
ಶಂಭೂರು ಡ್ಯಾಂ- ಎ. 11ರಂದು ನೀರಿನ ಮಟ್ಟ -0 ಮೀಟರ್