ಚಾರ್ಮಾಡಿ: ಚಾರ್ಮಾಡಿ ಘಾಟಿಯಲ್ಲಿ ಲಘು ಹಾಗೂ ಘನವಾಹನ ಸಂಚಾರಕ್ಕೆ ಚಿಕ್ಕಮಗಳೂರು ಡಿ.ಸಿ ಕೆ.ಎನ್ ರಮೇಶ್ ರವರು ಮಾ.17 ರಂದು ಆದೇಶ ನೀಡಿದ್ದಾರೆ, ಆದರೆ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಘನವಾಹನ ಸಂಚಾರಕ್ಕೆ ನೀಡಿರುವ ಆದೇಶವನ್ನು ಹಿಂಪಡೆದಿದ್ದಾರೆ.


ಭಾರಿ ಮಳೆಯಿಂದ ಅಸ್ಥವ್ಯಸ್ತವಾಗಿದ್ದ ಚಾರ್ಮಾಡಿ ಘಾಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಕರ್ನಾಟಕ ಸಾರಿಗೆ ಬಸ್ಸುಗಳು ಹಾಗೂ ಘನವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ರವರು ಘನವಾಹನ ಸಂಚಾರಕ್ಕೆ ಆದೇಶ ನೀಡಿದ್ದರು. ಆದರೆ ದ.ಕ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ರವರು ದ.ಕ.ಜಿಲ್ಲಾ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮೋರಿ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಅಪೂರ್ಣವಾಗಿರುವ ಕಾರಣ ಘನವಾಹನ ಸಂಚಾರಕ್ಕೆ ತಾತ್ಕಾಲಿಕ ತಡೆ ಹಾಗೂ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ, ಅದರಂತೆ ಡಿ.ಸಿ ಕೆ.ಎನ್ ರಮೇಶ್ ಆದೇಶವನ್ನು ಹಿಂಪಡೆದಿದ್ದು, ಘನವಾಹನ ಸಂಚಾರಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ.
ಈ ಕುರಿತು ಮಾಹಿತಿ ಇಲ್ಲದೆ ತರಕಾರಿ ಸಾಗಾಟದ ಲಾರಿಗಳು ಹಾಗೂ ಇನ್ನಿತರ ಗೃಹಬಳಕೆ ಸರಕು ಸಾಗಾಟದ ಲಾರಿಗಳು ಚಾರ್ಮಾಡಿ ಘಾಟಿಯಲ್ಲಿ ಸಂಚಾರ ನಡೆಸಿದ್ದು, ಈ ವಾಹನಗಳನ್ನು ಚಾರ್ಮಾಡಿ ಚೆಕ್‌ಪೋಸ್ಟ್ ಗಳಲ್ಲಿ ತಡೆಹಿಡಿಯಲಾಗಿತ್ತು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು ಹಾಗಾಗಿ ಮಾಹಿತಿ ಇಲ್ಲದೆ ಸಂಚರಿಸಿದ ವಾಹನಗಳಿಗಷ್ಟೇ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.












